ಇನ್ನೊಮ್ಮೆ ಅವಕಾಶ ನೀಡಿ
ನರಸಿಂಹರಾಜಪುರ: ಚಿಕ್ಕಮಗಳೂರು ಜಿಲ್ಲೆಯಲ್ಲಿ ನಗರ ಸಭೆ,ಪುರಸಭೆ ಹಾಗೂ ಪಪಂ ಚುನಾವಣೆಯಲ್ಲಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಆಧಾರದ ಮೇಲೆ ಮತ ಕೇಳಲಿದ್ದೇವೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್. ಜೀವರಾಜ್ ತಿಳಿಸಿದರು. ಕೃಷಿಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಶೃಂಗೇರಿ ಕ್ಷೇತ್ರದ ಮೂರೂ ತಾಲೂಕುಗಳ ಪಪಂ ವಾರ್ಡಗಳಲ್ಲೂ ದಕ್ಷ ಅಭ್ಯರ್ಥಿಗಳನ್ನು ಚುನಾವಣೆ ಕಣಕ್ಕೆ ಇಳಿಸಿದ್ದೇವೆ. ಅಪಪ್ರಚಾರದ ನಡುವೆ ನಾವು ಅಭಿವೃದ್ಧಿ ಬಗ್ಗೆ ಮತದಾರರಿಗೆ ತಿಳಿಸಲಿದ್ದೇವೆ. ಜಿಕ್ಕಮಗಳೂರು ನಗರಸಭೆಗೆ 15 ಕೋಟಿ ಹಾಗೂ ಜಿಲ್ಲೆಯ ಉಳಿದ ಪಪಂ,ಪುರಸಭೆಗಳಿಗೆ ತಲಾ 5 ಕೋಟಿ ರುಪಾಯಿ ಅನುದಾನ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ. ನರಸಿಂಹರಾಜಪುರ, ಕೊಪ್ಪ ಹಾಗೂ ಶೃಂಗೇರಿ ಪಟ್ಟಣಗಳು ಅಭಿವೃದ್ಧಿ ಹೊಂದಿದೆ. ಮತದಾರರು ಇನ್ನೊಮ್ಮೆ ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದರು. ನರಸಿಂಹರಾಜಪುರ ಪಪಂಗೆ ಹಿಂದೆ ಮಳಿಗೆಗಳಿಂದ ಹೆಚ್ಚು ಬಾಡಿಗೆ ಬರುತ್ತಿರಲಿಲ್ಲ. ನಾವು ನೂತನ ಮಳಿಗೆ ನಿರ್ಮಿಸಿ ಬಾಡಿಗೆ ನೀಡಿರುವುದರಿಂದ ಈಗ ಪಪಂಗೆ ವಾರ್ಷಿಕ 45 ಲಕ್ಷ ರುಪಾಯಿ ಬಾಡಿಗೆ ಬರುತ್ತಿದೆ. ಈಗ ಸ್ವಂತ ಶಕ್ತಿಯಿಂದ ಪಪಂ ಮುನ್ನೆಡಸಬಹುದಾಗಿದೆ. ಬಿ.ಎಚ್. ಕೈಮರದಿಂದ ಪಟ್ಟಣದವರೆಗೂ ಉತ್ತಮ ರಸ್ತೆ ನಿರ್ಮಾಣ ಮಾಡಿದ್ದರೂ ಬಸ್ಸು ನಿಲ್ದಾಣದ ಎದರು ಕೆಲವು ಕಟ್ಟಡಗಳು ಇನ್ನೂ ಉಳಿದಿದೆ. ಈ ಬಗ್ಗೆ ವಿರೋದ ಪಕ್ಷಗಳು ಉತ್ತರಿಸಬೇಕಾಗಿದೆ ಎಂದು ಸವಾಲು ಹಾಕಿದರು.
2 ರುಪಾಯಿಗೆ ಅಕ್ಕಿ: ರಾಜ್ಯ ಸರ್ಕಾರ 2 ರುಪಾಯಿಗೆ ಬಡವರಿಗೆ ಅಕ್ಕಿ ಕೊಡಲು ತೀರ್ಮಾನಿಸಿದೆ. ಭಾಗ್ಯಲಕ್ಷ್ಮಿ ಯೋಜನೆಯ ಮೊತ್ತ ಹೆಚ್ಚಿಸಲಾಗುತ್ತದೆ. ಇದು ಏಪ್ರಿಲ್ 1 ರಿಂದ ಜಾರಿಗೆ ಬರುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ದುಸ್ಥಿತಿಯಲ್ಲಿದೆ. ಕಾಂಗ್ರೆಸ್‌ಗೆ ಮುಂದಿನ ಶಾಸಕ ಸ್ಥಾನಕ್ಕೆ ಅಭ್ಯರ್ಥಿಗಳು ಸಿಕ್ಕದೆ ಬಿಜೆಪಿ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುವ ಹಂತ ತಲುಪಿದೆ ಎಂದು ಟೀಕಿಸಿದರು. ಈ ಸಂದರ್ಭದಲ್ಲಿ ಆಶೀಶ್ ಕುಮಾರ್, ನೀಲೇಶ್, ಕೆ.ಪಿ. ಸಂಪತ್ ಕುಮಾರ್, ಮಂಜುನಾಥ್ ಲಾಡ್, ಜಯರಾಂ, ಸತ್ಯನಾರಾಯಣಸ್ವಾಮಿ, ಜೆ.ಜಿ.ನಾಗರಾಜ್, ಮುತ್ತಿನಕೊಪ್ಪ ಗೋಪಾಲ್, ವೈ.ಎಸ್. ಗಣೇಶ್, ಜಯರಾಂ, ಎಚ್.ಎಂ. ಮನು, ಪಿ.ಜೆ. ಆಂಟೋನಿ ಇದ್ದರು.