ಚಳ್ಳಕೆರೆ: 97 ನಾಮಪತ್ರ
ಚಳ್ಳಕೆರೆ: ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಫೆ.23ರಂದು ವಿವಿಧ ಪಕ್ಷಗಳ ಒಟ್ಟು 97 ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದು, ಪುರಸಭೆ ನಿರ್ಗಮನ ಅಧ್ಯಕ್ಷೆ ಪಿ. ಷಂಶಾದ್ ತಡವಾಗಿ ಬಂದ ಕಾರಣ ಚುನಾವಣಾ ಅಧಿಕಾರಿಗಳು ನಾಮ ಪತ್ರ ಸಲ್ಲಿಸಲು ಅವಕಾಶ ನೀಡಲಿಲ್ಲ.
ಅಂದು ಬೆಳಗಿನಿಂದಲೇ ನಾಮ ಪತ್ರ ಸಲ್ಲಿಸುವ ಕಾರ್ಯ ಅತ್ಯಂತ ಚುರುಕಿನಿಂದ ಕೂಡಿತು. ಹಲವಾರು ಅಭ್ಯರ್ಥಿಗಳು ನೂರಾರು ಬೆಂಬಲಿಗರೊಂದಿಗೆ ನಾಮ ಪತ್ರ ಸಲ್ಲಿಸಲು ಪುರಸಭೆಗೆ ಆಗಮಿಸಿದರು. ಆದರೆ, ಪೊಲೀಸರು ಕೇವಲ ಐದು ಜನಕ್ಕೆ ಮಾತ್ರ ನಾಮ ಪತ್ರ ಸಲ್ಲಿಸಲು ಪ್ರವೇಶ ನೀಡುತ್ತಿದ್ದರು. ಉಪನಿರೀಕ್ಷಕ ಡಿ.ಜಿ. ಶ್ರೀನಿವಾಸ್, ಬಿ. ಪಂಪಾಪತಿ ಮತ್ತು ಮಂಜುನಾಥ ರೆಡ್ಡಿ, ಪುರಸಭೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ನಾಮ ಪತ್ರ ಸಲ್ಲಿಕೆ ಕಾರ್ಯ ಸುಗಮವಾಗಿ ನಡೆಯುವಂತೆ ನೋಡಿಕೊಂಡರು.
ಪರಿಶೀಲನೆ: ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಂ. ನಾರಾಯಣಸ್ವಾಮಿ ಭೇಟಿ ನೀಡಿ ಚುನಾವಣಾ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ತಹಸೀಲ್ದಾರ್ ಡಿ.ಕೆ. ರಾಮಚಂದ್ರಪ್ಪ, ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ಡಾ. ತಿಪ್ಪೇಸ್ವಾಮಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಚುನಾವಣೆ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ ನಂತರ ಕೆಲವೊಂದು ಸೂಚನೆಗಳನ್ನು ಸಹ ನೀಡಿರುತ್ತಾರೆ.
ಕಾಂಗ್ರೆಸ್ ಪಕ್ಷದಿಂದ 29, ಜೆಡಿಎಸ್-17, ಪಕ್ಷೇತರ-17, ಬಿಜೆಪಿ-13, ಕೆಜೆಪಿ-11, ಬಿಎಸ್‌ಆರ್-10 ನಾಮಪತ್ರಗಳನ್ನು ಸಲ್ಲಿಸಿರುತ್ತಾರೆ. ಪುರಸಭೆ ಚುನಾವಣೆಗೆ ಒಟ್ಟು 153 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. 25 ರಂದು ನಾಮಪತ್ರ ಪರಿಶೀಲನಾ ಕಾರ್ಯನಡೆಯಲಿದ್ದು, 27ಕ್ಕೆ ವಾಪಾಸ್ ಪಡೆಯಲು ಅವಕಾಶವಿದೆ.