ಮತ್ತೆ ಬುಗಿಲೆದ್ದ ಕಾಂಗ್ರೆಸ್ ಶೀತಲ ಸಮರ
ಹಿರಿಯೂರು: ಒಂದು ಕಾಲದಲ್ಲಿ ಪಕ್ಷದ ಭದ್ರಕೋಟೆಯಾಗಿದ್ದು, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಐದನೇ ಸ್ಥಾನಕ್ಕೆ ಕುಸಿಯಲ್ಪಟ್ಟಿದ್ದ ಕಾಂಗ್ರೆಸ್ ಪುರಸಭಾ ಚುನಾವಣಾ ಟಿಕೆಟ್ ನೀಡಿಕೆ ಸಂಬಂಧ ಮತ್ತೆ ತನ್ನ ಹಳೆಯ ಚಾಳಿ ಮುಂದುವರೆಸಿದೆ.
ಶುಕ್ರವಾರ ಹೈಕಮಾಂಡ್ ಆದೇಶ ಹೊತ್ತು ಟಿಕೆಟ್ ಹಂಚಿಕೆ ಮಾಡಲು ಬಂದ ಮಾಜಿ ಸಚಿವ ಎ. ಕೃಷ್ಣಪ್ಪನವರ ಮುಂದೆ ಹತ್ತಾರು ಸವಾಲುಗಳು ಬಿಚ್ಚಿಕೊಂಡಿವೆ. ಬಹು ನಾಯಕತ್ವದ ತಾಲೂಕು ಕಾಂಗ್ರೆಸ್ನಲ್ಲಿ ಟಿಕೆಟ್ ಹಂಚಿಕೆಯ ಜವಾಬ್ದಾರಿಯನ್ನು ಹೊರಲು ನಾ ಮುಂದು, ತಾ ಮುಂದು ಎಂಬ ನೂಕು ನುಗ್ಗಲು ಶುರುವಾಗಿ ಪರಸ್ಪರ ನಾಯಕರ ನಡುವೆ ಇದ್ದ ಶೀತಲ ಸಮರ ಹೊರಬಿದ್ದಿದೆ.
ಪ್ರತಿಷ್ಠೆಯ ಪ್ರಶ್ನೆ: ಮಾಜಿ ಸಂಸದ ಪಿ. ಕೋದಂಡರಾಮಯ್ಯ, ಮಾಜಿ ಜಿಪಂ ಅಧ್ಯಕ್ಷೆ ಗೀತಾ ನಂದಿನಿ ಗೌಡ, ಮಾಜಿ ಸಚಿವ ಏಕಾಂತಯ್ಯ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಚ್. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸೇತುರಾಂ ಸೇರಿದಂತೆ ಹಾಲಿ ಶಾಸಕ ಡಿ. ಸುಧಾಕರ್ ಈ ಸಲದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಪುರಸಭೆ ಚುನಾವಣಾ ಟಿಕೆಟ್ ಹಂಚಿಕೆ ಜವಾಬ್ದಾರಿಯನ್ನು ಯಾರ ಹೆಗಲಿಗೆ ಬೀಳುತ್ತೋ ಅವರ ಪರ ಹೈಕಮಾಂಡ್ ಶ್ರೀ ರಕ್ಷೆಯಿದೆಯನ್ನುವ ಸಂದೇಶ ಹೋಗುತ್ತದೆಯೆನ್ನುವ ಕಾರಣಕ್ಕೆ ಟಿಕೆಟ್ ಹಂಚಿಕೆಯ ಜವಾಬ್ದಾರಿ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿತ್ತು.
ಚುನಾವಣಾ ಸಿದ್ಧತೆ: ಕಳೆದ ತಿಂಗಳಿನಿಂದಲೂ ಕಾಂಗ್ರೆಸ್ ಹೈಕಮಾಂಡ್ ಸಂಪರ್ಕದಲ್ಲಿದ್ದು, ಪಕ್ಷ ಸೇರ್ಪಡೆಯ ಎಲ್ಲ ಅನಧಿಕೃತ ಫಾರ್ಮಾಲಿಟಿ ಮುಗಿಸಿ ಬಂದಿದ್ದ ಸುಧಾಕರ್ ತನ್ನದೇ ಆದ ಲೆಕ್ಕಾಚಾರಗಳೊಂದಿಗೆ ಪುರಸಭಾ ಚುನಾವಣಾ ಸಿದ್ಧತೆಯಲ್ಲಿ ತೊಡಗಿದ್ದಾರೆ. ಆದರೆ ಸುಧಾಕರ್ ಕಾಂಗ್ರೆಸ್ ಸೇರ್ಪಡೆಯಾದರೆ ತಮ್ಮ ಅಸ್ತಿತ್ವಕ್ಕೆ ಎಳ್ಳು ನೀರು ಬಿಟ್ಟಂತಾಗುತ್ತದೆಯೆನ್ನುವುದನ್ನು ಮನಗಂಡಿದ್ದ ಉಳಿದ ನಾಯಕರು ಪ್ರಸ್ತಾಪವನ್ನು ಒಕ್ಕೊರಲಿನಿಂದ ವಿರೋಧಿಸುತ್ತಲೇ ಬಂದಿದ್ದರು.
ಆದರೆ ಕಾಂಗ್ರೆಸ್ ಸೇರ್ಪಡೆಗೆ ಅಂತಿಮವಾಗಿ ಹೈಕಮಾಂಡ್ ಬಳಿ ಹಸಿರು ನಿಶಾನೆ ಪಡೆದು ಬಂದ ಕಾರಣಕ್ಕೆ ಈ ಬಾರಿ ಪುರಸಭಾ ಚುನಾವಣಾ ಟಿಕೆಟ್ ಹಂಚುವ ಅರ್ಧ ಜವಾಬ್ದಾರಿ ಶಾಸಕ ಸುಧಾಕರ್ಗೆ ಉಳಿದ ಹೊಣೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಚ್. ಮಂಜುನಾಥ್ಗೆ ನೀಡುವಂತೆ ಹೈಕಮಾಂಡ್ ಸೂಚಿಸಿತ್ತೆನ್ನುವುದು ಬಹಿರಂಗಗೊಡಿದೆ.
ಆದರೆ ಈ ಪ್ರಸ್ತಾಪವನ್ನು ನಿನ್ನೆಯಿಂದಲೂ ವಿರೋಧಿಸುತ್ತಾ ಬಂದ ಕಾಂಗ್ರೆಸ್ ಹಳೆ ನಾಯಕರು ಯಾವ ಕಾರಣಕ್ಕೂ ಸುಧಾಕರ್ ಕೈಗೆ ಅಧಿಕಾರ ಹೋಗದಂತೆ ತಡೆ ಹಿಡಿಯಲು ಒಗ್ಗಟ್ಟಿನ ಕಾರ್ಯಾಚರಣೆ ನಡೆಸಿದೆ. ಶುಕ್ರವಾರ ದುರ್ಗದ ಡಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಯಾವ ನಿರ್ಣಯಕ್ಕೂ ಬಾರದ ಕಾರಣಕ್ಕೆ ಸಮಸ್ಯೆ ಶನಿವಾರಕ್ಕೆ ಮುಂದೂಡಲ್ಪಟ್ಟಿದೆ.
ರಾಷ್ಟ್ರೀಯ ಪಕ್ಷವೊಂದರ ಟಿಕೆಟ್ ಹಂಚಿಕೆಯ ಪ್ರಹಸನ ನಾಯಕತ್ವದ ಜಿದ್ದಾಜಿದ್ದಿನಿಂದಾಗಿ ನಾಮ ಪತ್ರ ಸಲ್ಲಿಸುವ ಕಡೆಯ ದಿನವಾದ ಶನಿವಾರ ಮಧ್ಯಾಹ್ನದವರೆಗೆ ಬಿ.ಫಾರಂ ಇಲ್ಲದ ಟಿಕೆಟ್ ಆಕಾಂಕ್ಷಿಗಳು ಆತಂಕಕ್ಕೆ ಬಿದ್ದು ಹೈರಾಣಾಗಿದ್ದಾರೆ. ಒಮ್ಮೆ ಸುಧಾಕರ್ ನಿವಾಸದ ಬಳಿ ಆಕಾಂಕ್ಷಿಗಳ ದಂಡು ಜಮಾವಣೆಗೊಂಡರೇ ಮತ್ತೊಮ್ಮೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನಿವಾಸ ಸೇರಿದಂತೆ ವಿವಿಧ ನಾಯಕರ ಮನೆಯನ್ನು ಎಡತಾಕುವ ಕೆಲಸ ಮಾಡಿದ್ದಾರೆ.
ಅಂತಿಮವಾಗಿ ಇಂದು ಮಧ್ಯಾಹ್ನ ಸಂಸದ ಪಿ. ಕೋದಂಡ ರಾಮಯ್ಯನವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಹೈಕಮಾಂಡ್ ನಿರ್ಣಯ ಜಾರಿಯಾಗದ ಕಾರಣ ನಿಮ್ಮ ಇಷ್ಟದಂತೆ ನೀವು ನಿರ್ಣಯ ಕೈಗೊಳ್ಳಿಯೆಂದು ಹೇಳಿದ ಶಾಸಕ ಸುಧಾಕರ್ ಮಧ್ಯದಲ್ಲೇ ಸಭೆಯಿಂದ ನಿರ್ಗಮಿಸಿದ್ದಾರೆ.
ಸುಧಾಕರ್ ತೆರಳಿದ ನಂತರ ಇತ್ತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನೂ ಬಿಟ್ಟು ಮಾಜಿ ಜಿಪಂ ಅಧ್ಯಕ್ಷೆ ಗೀತಾ ನಂದಿನಿ ಗೌಡರ ಉಸ್ತುವಾರಿಯಲ್ಲಿ ತರಾತುರಿಯಲ್ಲಿ ಟಿಕೆಟ್ ಹಂಚಲಾಗಿದೆ.
ಅಲ್ಲಿಗೆ ಪುರ ಸಭೆಯಂತಹ ಸ್ಥಳೀಯ ಚುನಾವಣೆಯಲ್ಲಿಯೂ ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಭುಗಿಲೆದ್ದ ಕಾರಣಕ್ಕೆ ಮತ್ತು ಸುಧಾಕರ್ ಬೆಂಬಲಿಗರಿಗೆ ಟಿಕೆಟ್ ನೀಡುವುದನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರಿಂದ ತಂತಾನೆ ಬಂಡಾಯ ಅಭ್ಯರ್ಥಿಗಳು ಜನ್ಮ ತಳೆಯಲು ಪಕ್ಷವೇ ಅವಕಾಶ ಮಾಡಿಕೊಟ್ಟಿರುವುದರಿಂದ ಈ ಚುನಾವಣೆಯಲ್ಲಿ ಪಕ್ಷ ತನ್ನ ಭವಿಷ್ಯಕ್ಕೆ ತಾನೇ ಕಲ್ಲು ಹಾಕಿಕೊಂಡಿದೆಯನ್ನುವುದು ಈಗ ಸಾರ್ವಜನಿಕ ಚರ್ಚೆಯ ಅಂಶವಾಗಿದೆ.