ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಾಧನೆಯಿಂದ ಸಾರ್ವಕಾಲಿಕರಾಗಲು ಕರೆ

Lingaraj Badiger
Updated On : 25 Feb 2013, 11:43 am

ಚಿಕ್ಕಮಗಳೂರು: ಬಹಳಷ್ಟು ಜನರು ತಾವು ಬದುಕಿದ್ದಾಗಲೇ ಸಾಯುತ್ತಾರೆ. ಕೆಲವೇ ಕೆಲವು ಮಂದಿ ತಮ್ಮ ಕಾರ್ಯ ಸಾಧನೆಯಿಂದ ಜನಮಾನಸದಲ್ಲಿ ಉಳಿದು ಸದಾ ಬದುಕಿರುತ್ತಾರೆ ಅಂತಹವರಲ್ಲಿ ಸಮಾಜ ಸೇವೆಗಾಗಿ ಬಾಲಕರಿಗಾಗಿ ಸ್ಕೌಟ್ಸ್ ಚಳುವಳಿಯನ್ನು ಪ್ರಪಂಚದಲ್ಲಿ ಹುಟ್ಟು ಹಾಕಿದ ಲಾರ್ಡ್ ಬೇಡನ್ ಪೊವೆಲ್ ಹಾಗೂ ಅವರ ಪತ್ನಿ ಲೇಡಿ ಬೇಡನ್ ಪೊವೆಲ್ ಸದಾ ನೆನಪಿನಲ್ಲಿ ಉಳಿಯುತ್ತಾರೆ ಎಂದು ಜಿಲ್ಲಾ ಸ್ಕೌಟ್ಸ್ ಆಯುಕ್ತ ಎ.ಎನ್. ಮಹೇಶ್ ಹೇಳಿದ್ದಾರೆ.
ಜಿಲ್ಲಾ ಆಟದ ಮೈದಾನದಲ್ಲಿ ಚಿಕ್ಕಮಗಳೂರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸ್ಥಳೀಯ ಸಂಸ್ಥೆವತಿಯಿಂದ ಇತ್ತೀಚೆಗೆ  ನಡೆದ ಸಂಸ್ಥೆಯ ಸಂಸ್ಥಾಪಕ ಬೇಡನ್ ಪೊವೆಲ್ ರವರ ಜನ್ಮ ದಿನಾಚರಣೆ, ಸ್ಕೌಟ್ಸ್ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೊವೆಲ್ ಜನಿಸಿ 157 ವರ್ಷಗಳು ಕಳೆಯಿತು. ಸ್ಕೌಟ್ಸ್ ಚಳುವಳಿಗೆ ಶತಮಾನ ಕಳೆಯಿತು ಇಂದು ಈ ಚಳುವಳಿಯಲ್ಲಿ ಕೋಟ್ಯಂತರ ಯುವಕರು ಭಾಗವಹಿಸಿದ್ದು ಹೆಚ್ಚು ಯುವಕರನ್ನು ಹೊಂದಿರುವ ದೊಡ್ಡ ಸಂಸ್ಥೆಯಾಗಿ ಪ್ರಪಂಚದಲ್ಲಿ ಹೊರಹೊಮ್ಮಿದೆ ಎಂದರು.
 ಇದೇ ಸಂದರ್ಭದಲ್ಲಿ ಮೈಸೂರು ವಿಭಾಗ ಮಟ್ಟದ ಉತ್ತಮ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಆಯ್ಕೆಯಾದ ಚಿಕ್ಕಮಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ನಾಗೇಶ್‌ರನ್ನು ಸನ್ಮಾನಿಸಲಾಯಿತು.
ಶಿಸ್ತು ಕಲಿಸುವ ಸಂಸ್ಥೆ: ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಎಸ್.ಜಿ. ನಾಗೇಶ್, ಕಷ್ಟದಲ್ಲಿರುವಂತಹವರಿಗೆ ಸಹಾಯ ಮಾಡುವಂತಹ ಕೆಲಸವಾಗಬೇಕು ಲಾರ್ಡ್ ಬೇಡನ್ ಪೊವೆಲ್‌ರವರು ಮಕ್ಕಳಿಗಾಗಿ ಈ ಚಳುವಳಿಯನ್ನು ಪ್ರಾರಂಭಿಸಿದರು. ಉತ್ತಮ ಶೈಕ್ಷಣಿಕ ವಾತಾವರಣವನ್ನು ಹಾಗೂ ಮಕ್ಕಳಲ್ಲಿ ಹೆಚ್ಚಿನ ಜವಾಬ್ದಾರಿ ಹೊಣೆಗಾರಿಕೆ ಶಿಸ್ತನ್ನು ಕಲಿಸುವಂತಹ ಸಂಸ್ಥೆಯಾಗಿದ್ದು, ಬದುಕಿನ ಭವಿಷ್ಯವನ್ನು ರೂಪಿಸಿಕೊಳ್ಳುವಂತಹ ಸಂದರ್ಭಗಳಲ್ಲಿ ಇಲ್ಲಿ ಕಲಿತಂತಹ ಶಿಕ್ಷಣ ಸಹಾಯಕ್ಕೆ ಬರಲಿದೆ ಎಂದು ಹೇಳಿದರು.
 ವಾರ್ತಾ ಇಲಾಖೆಯ ಸಹಾಯಕ ನಿದೇಶಕ ಖಾದರ್ ಶಾ ಮಾತನಾಡಿ, ನೀವು ಮುಂದಿನ ದಿನಗಳಲ್ಲಿ ಜೀವನದಲ್ಲಿ ಮುಂದೆ ಬರಲು ಈ ಸಂಸ್ಥೆ ಕಾರಣವಾಗುತ್ತದೆ ಎಂದರು.
ತರಬೇತಿ ಶಿಬಿರ: ಬೆಳಗಿನಿಂದ ನಡೆದ ಕಾರ್ಯಕ್ರಮದಲ್ಲಿ ಸ್ಕೌಟರ್ ಗೈಡರ್‌ಗಳಿಗೆ ತರಬೇತಿ ಶಿಬಿರ ನಡೆಯಿತು. ನಂತರ ಮಕ್ಕಳಿಂದ ಆಟದ ಮೈದಾನದಲ್ಲಿ ಗಾಳಿಪಟ ಮಾಡುವುದು ಮತ್ತು ಹಾರಾಟ, ಮಣ್ಣಿನಲ್ಲಿ ಕಲಾಕೃತಿ ಮಾಡುವುದು, ಧ್ವಜವನ್ನು ನಡೆವ ಸ್ಪರ್ಧೆಗಳು ನಡೆದು ಬಹುಮಾನ ವಿತರಿಸಲಾಯಿತು. ಜಿಲ್ಲೆಯ 250 ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ನೀಡಲಾಯಿತು ಹಾಗೂ ರಾಷ್ಟ್ರೀಯ ಸಂಸ್ಥೆಯಿಂದ ವೃಕ್ಷ ಮಣೆ ಬ್ಯಾಡ್ಸ್ ಪಡೆದ ಕಿರಣ್ ಹಾಗೂ ರಾಘವೇಂದ್ರರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
 ಕಾರ್ಯಕ್ರಮದಲ್ಲಿ ಜಿಲ್ಲಾ ಗೈಡ್ ಆಯುಕ್ತ ಸಿ.ಎಂ. ಪಿಂಟೋ, ಜಿಲ್ಲಾ ಕಾರ್ಯದರ್ಶಿ ಶಶಿಧರ್ ರಾವ್, ಸಿಸ್ಟರರ್ಸಿಂಧಿಯಾ ಉಪಸ್ಥಿತರಿದ್ದರು. ಜಿಲ್ಲಾ ತರಬೇತಿ ಆಯುಕ್ತ ಸಂಧ್ಯಾರಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂದಕುಮಾರ್ ಸ್ವಾಗತಿಸಿ, ಭಾರತಿ ಶಿವರುದ್ರಪ್ಪ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement