ಅರಣ್ಯ ಸಮಿತಿ ರಚನೆ ವಿರೋಧಿಸಿ ಪ್ರತಿಭಟನೆ
ಚಿಕ್ಕಮಗಳೂರು: ತಾಲೂಕಿನ ಹುಯಿಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಗ್ರಾಮ ಅರಣ್ಯ ಸಮಿತಿಗಳನ್ನು ರಚನೆ ಮಾಡಲು ಅನುಮತಿ ನೀಡಬಾರದೆಂದು ಹುಯಿಗೆರೆ, ಅಂಡವಾನೆ, ಕರಗಣಿ, ಮಣಬೂರು, ಬಿಕ್ಕರಣೆ ಹಾಗೂ ಸಾರಗೋಡು ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಈ ಗ್ರಾಮಗಳಲ್ಲಿ ಒಕ್ಕಲಿಗರು, ಹರಿಜನ, ಗಿರಿಜನ, ಪೂಜಾರರು, ಶೆಟ್ಟರು, ಕ್ರಿಶ್ಚಿಯನ್ನರು, ಮುಸ್ಲಿಮರು ಸೇರಿದಂತೆ ಹಲವು ಜನಾಂಗದವರು ಹಲವಾರು ವರ್ಷಗಳಿಂದ ವ್ಯವಸಾಯ, ವ್ಯಾಪಾರ, ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಈಗ ಕೆಲವೇ ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಇಲ್ಲಿನ ಮಣಬೂರು ಗ್ರಾಮಕ್ಕೆ ವಲಸೆ ಬಂದಿರುವ 15 ರಿಂದ 20 ಕುಟುಂಬ ವಾಸವಾಗಿವೆ ಎಂದು ಹೇಳಿದ್ದಾರೆ.
ಆದಿವಾಸಿಗಳು: ಈಗ ಹಸಲರು ಎಂಬ ಜನಾಂಗದವರು ತಾವು ಬುಡಕಟ್ಟು ಜನಾಂಗದವರು ಆದಿವಾಸಿಗಳು ಎಂದು ಹೇಳಿಕೊಂಡು ಹುಯಿಗೆರೆ ಮಣಬೂರು ಮಧ್ಯೆ ಇರುವ ಮತ್ತಿಗುಡ್ಡ ಎಂಬ ಕಾಡಿಗೆ ತಾವೇ ಒಡೆಯರು, ಇದರೊಳಗೆ ಯಾರು ಪ್ರವೇಶ ಮಾಡುವಂತಿಲ್ಲ ಎಂದು ಹೇಳಿ ಬೋರ್ಡ್ವನ್ನು ಸಹ ಹಾಕಿದ್ದಾರೆ. ಕಾಡಿನಲ್ಲಿ ಯಾರಾದರೂ ಗ್ರಾಮದವರು ಹೋದರೆ ಬೆದರಿಕೆ ಹಾಕಿ ಯಾರು ಕಾಡಿನೊಳಗೆ ಪ್ರವೇಶಿಸಕೂಡದು ಎಂದು ಹೇಳಿಕೊಂಡು ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದ್ವೇಷ ಬೆಳೆಯುವ ಸಾಧ್ಯತೆ: ಇಲ್ಲಿ ಅರಣ್ಯ ಹಕ್ಕು ಸಮಿತಿಯನ್ನು ಯಾವುದೇ ಕಾರಣಕ್ಕೂ ರಚನೆಗೆ ಅನುಮತಿ ನೀಡಬಾರದು. ಅವಕಾಶ ನೀಡಿದ್ದೆಯಾದಲ್ಲಿ ಗ್ರಾಮಸ್ಥರಿಗೂ ಈ ಜನಾಂಗಕ್ಕೂ ದ್ವೇಷ ಬೆಳೆದು ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತವೂ ಸಂಭವಿಸಬಹುದು ಎಂದು ಮನವಿಯಲ್ಲಿ ಹೇಳಿದ್ದಾರೆ.
ಎಂ.ಎಚ್. ಮಂಜುನಾಥ್, ಸುರೇಂದ್ರ, ಧರ್ಮೇಗೌಡ, ಎಂ.ವಿ. ರವಿ, ಗಣೇಶ್ ಪಾಲ್ಗೊಂಡಿದ್ದರು.