ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಎಲ್ಲ ಶಾಲಾ ವಾರ್ಷಿಕೋತ್ಸವ ಡಿಸೆಂಬರ್‌ನಲ್ಲಿ

Rashmi Kasaragodu
Updated On : 26 Feb 2013, 11:32 am

ಚಿಕ್ಕಮಗಳೂರು: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲಾ ಶಾಲೆಗಳ ವಾರ್ಷಿಕೋತ್ಸವ ಸಮಾರಂಭಗಳನ್ನು ಡಿಸೆಂಬರ್ ತಿಂಗಳಿನಲ್ಲೇ ನಡೆಸುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ನಾಗೇಶ್ ಹೇಳಿದ್ದಾರೆ.
ತಾಲೂಕಿನ ಅಲ್ಲಂಪುರದ ಕುವೆಂಪು ಶತಮಾನೋತ್ಸವ ಶಾಲೆಯಲ್ಲಿ ಇತ್ತೀಚೆಗೆ ನಡೆದ ವಾರ್ಷಿಕೋತ್ಸವ  ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರತಿವರ್ಷ ಸರ್ಕಾರಿ ಶಾಲೆಗಳ ವಾರ್ಷಿಕೋತ್ಸವ ಸಮಾರಂಭಗಳನ್ನು ಜನವರಿ, ಫೆಬ್ರವರಿ ಮತ್ತು ಮಾರ್ಚ್  ತಿಂಗಳುಗಳಲ್ಲಿ ನಡೆಸಲಾಗುತ್ತಿದೆ. ಆ ವೇಳೆಗೆ ಪರೀಕ್ಷೆಗಳು ಸಮೀಪವಿರುವುದರಿಂದಾಗಿ ವಿದ್ಯಾರ್ಥಿಗಳಿಗೆ ಓದಲು ಕಷ್ಟವಾಗುತ್ತಿದೆ. ಆ ಹಿನ್ನೆಲೆಯಲ್ಲಿ ಈ ನೂತನ ವ್ಯವಸ್ಥೆ ಜಾರಿಗೆ ತರಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ ಎಂದರು.
ಶಿಕ್ಷಣ ಇಲಾಖೆಯಿಂದ ಸೂಚನೆ: 1ನೇ ತರಗತಿಯಿಂದ 10ನೇ ತರಗತಿವರೆಗೂ ವಾರ್ಷಿಕೋತ್ಸವ ಸಮಾರಂಭಗಳನ್ನು ಪ್ರತಿವರ್ಷ ಡಿಸೆಂಬರ್  ತಿಂಗಳಿನಲ್ಲೇ ನಡೆಸುವಂತೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ  ಸೂಚಿಸಲಾಗುವುದು ಎಂದು ತಿಳಿಸಿದರು.
ಕುವೆಂಪು ಶತಮಾನೋತ್ಸವ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ 9 ಮತ್ತು 10ನೇ ತರಗತಿಗಳನ್ನು  ಆರಂಭಿಸಲಾಗುವುದು ಎಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ರಾಜೇಗೌಡ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ತಮ್ಮ  ಕರ್ತವ್ಯ ಮುಗಿಯಿತೆಂದು ಕುಳಿತುಕೊಳ್ಳದೆ ತಮ್ಮ ಮಕ್ಕಳ ಶಾಲೆಗೆ ಆಗಾಗ ತೆರಳಿ ಅವರ ವಿದ್ಯಾಭ್ಯಾಸವನ್ನು ನಿರಂತರವಾಗಿ ಗಮನಿಸಬೇಕು ಎಂದು ಸಲಹೆ ಮಾಡಿದರು.
ಬಹುಮಾನ ವಿತರಣೆ: ವಾರ್ಷಿಕೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರುಗಳಾದ ಹೊನ್ನಪ್ಪ, ಸ್ವಾಮಿ, ಬಸವರಾಜ್, ವೆಂಕಟೇಶ್, ಮೋಹನ್‌ಕುಮಾರ್, ಪುಟ್ಟರಾಜು, ನೂರ್‌ಜಹಾನ್, ಹೇಮಾವತಿ, ಶಿಕ್ಷಣ  ಸಂಯೋಜಕ ನಂಜುಂಡಯ್ಯ, ದೈಹಿಕ ಶಿಕ್ಷಣ ಅಧೀಕ್ಷಕ ರವಿಕುಮಾರ್ ಉಪಸ್ಥಿತರಿದ್ದರು.
ಶಿಕ್ಷಕಿ ವರಲಕ್ಷ್ಮಿ ವಾರ್ಷಿಕ ವರದಿ ಮಂಡಿಸಿದರು. ಮುಖ್ಯ ಶಿಕ್ಷಕ ಓಂಕಾರಪ್ಪ ಸ್ವಾಗತಿಸಿದರು. ಶಿಕ್ಷಕರಾದ ಎಲ್.ಜಿ. ಪರಮೇಶ್ವರಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು. ಲತಾ ಕುಮಾರಿ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement