ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದೇಶದಲ್ಲಿ ಅನರ್ಥಕಾರಿ ವಿವಿಗಳು

Rashmi Kasaragodu
Updated On : 26 Feb 2013, 11:38 am

ಸಿರಿಗೆರೆ: ದೇಶದಲ್ಲಿ 450 ವಿಶ್ವವಿದ್ಯಾನಿಲಯಗಳು, 250 ಡೀಮ್ಡ್ ವಿವಿಗಳು ಕೆಲಸ ನಿರ್ವಹಿಸುತ್ತಿವೆ. ಆದರೆ, ಇವು ಡೀಮ್ಡ್ ವಿವಿಗಳ ಸ್ವರೂಪ ತಾಳದೇ ಡೂಮ್ಡ್ ವಿವಿಗಳಾಗಿವೆ ಎಂದು ಹಿರಿಯ ಪತ್ರಕರ್ತ, ನಾಡೋಜ ಡಾ. ಪಾಟೀಲ ಪುಟ್ಟಪ್ಪ ತಿಳಿಸಿದ್ದಾರೆ.
ಸಂಶೋಧನಾ ಪ್ರಬಂಧ: ಸಿರಿಗೆರೆಯ ಬಿ. ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಸಂದರ್ಭದಲ್ಲಿ ತರಳಬಾಳು ಸ್ವಾಮೀಜಿಯವರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಈ ವಿವಿಗಳು ಪ್ರತಿವರ್ಷ ಸಾವಿರಾರು ಸಂಶೋಧನಾ ಪ್ರಬಂಧಗಳನ್ನು ಸ್ವೀಕರಿಸುತ್ತಿದ್ದು, ಅವುಗಳೆಲ್ಲವೂ ಜೊಳ್ಳುತನದಿಂದ ಕೂಡಿದ್ದು ಪ್ರತಿಶತ ಐದು ಪ್ರಬಂಧಗಳು ಕೂಡ ಅರ್ಹತೆಗೆ ಪಾತ್ರವಾಗಿರುವುದು ಅನುಮಾನವಾಗಿದೆ. ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ 200 ವಿಶ್ವವಿದ್ಯಾನಿಲಯಗಳ ಪಟ್ಟಿಯನ್ನು ಇತ್ತೀಚೆಗೆ ಪ್ರಕಟಿಸಲಾಗಿದ್ದು ಅವುಗಳಲ್ಲಿ ಭಾರತದ ಒಂದೂ ವಿಶ್ವವಿದ್ಯಾನಿಲಯ ಸ್ಥಾನ ಪಡೆದುಕೊಳ್ಳದೇ ಇರುವುದು ವಿಷಾದ ಎಂದರು.
ಅಧ್ಯಾಪಕರ ಕೆಲಸ: ವಿವಿಗಳಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕರಿಗೆ ಪ್ರತಿ ತಿಂಗಳೂ ಲಕ್ಷಾಂತರ ರುಪಾಯಿ ವೇತನ ನೀಡಲಾಗುತ್ತಿದೆ. ಈ ಅಧ್ಯಾಪಕರಿಂದ ನಮ್ಮ ವಿವಿಗಳಿಗೆ ಅದೆಷ್ಟು ನ್ಯಾಯ ಸಿಗುತ್ತಿದೆ. ಅವರು ಪಡೆದುಕೊಳ್ಳುತ್ತಿರುವ ವೇತನಕ್ಕೆ ಅವರು ಕೆಲಸ ಮಾಡುತ್ತಿದ್ದಾರೆಯೇ ಎಂಬುದು ಪ್ರಶ್ನಾರ್ಹ. ದೆಹಲಿಯಲ್ಲಿ ಕುಳಿತು ವೇತನ ನಿಗದಿಪಡಿಸುವ ಅಧಿಕಾರಿಗಳಿಗೆ ಅಧ್ಯಾಪಕರ ಕೆಲಸದ ಸ್ವರೂಪವೇ ಅರ್ಥವಾಗುತ್ತಿಲ್ಲ.
ಹಳ್ಳಿಯಲ್ಲಿ ಮಳೆ-ಬಿಸಿಲೆನ್ನದೆ ದುಡಿಯುವ ಗ್ರಾಮಾಂತರದ ಜನತೆಗೆ ಬದುಕನ್ನು ತೂಗಿಸಿಕೊಂಡು ಹೋಗುವಷ್ಟು ದುಡಿಮೆಯೇ ಇಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಶಿಕ್ಷಣ ಹಕ್ಕು: ಸಮಾಜದ ಎಲ್ಲ ರಂಗಗಳಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರುವ ರಾಜಕಾಣಿಗಳು ಸುಧಾರಣೆಯಾದರೆ ಮಾತ್ರ ಸುಸ್ಥಿರ ಸಮಾಜ ನಿರ್ಮಾಣವಾಗುತ್ತದೆ. ಆದರೆ ನಮ್ಮಲ್ಲಿರುವ ಬಹುತೇಕ ರಾಜಕಾರಣಿಗಳು ಪರಪ್ಪನ ಅಗ್ರಹಾರದ ಜೈಲಿನಲ್ಲಿರುವುದಕ್ಕೆ ಲಾಯಕ್ಕಾಗಿರುವುದರಿಂದ ಅವರಿಂದ ಸುಧಾರಣೆ ಬಯಸಲು ಸಾಧ್ಯವಿಲ್ಲ.
ದೇಶದಲ್ಲಿ ಜಾರಿಗೆ ಬಂದಿರುವ ಶಿಕ್ಷಣ ಹಕ್ಕು (ಆರ್.ಟಿ.ಇ) ಕಾಯ್ದೆ ಪೂರ್ಣವಾಗಿ ಜಾರಿಗೆ ಬಂದ ನಂತರ ಕನ್ನಡ, ಮಲೆಯಾಳಂ, ಅಸ್ಸಾಂ, ತೆಲುಗು, ತಮಿಳು ಮುಂತಾದ ಪ್ರಾದೇಶಿಕ ಭಾಷೆಗಳು ನಾಶವಾಗುತ್ತವೆ. ಪರೋಕ್ಷವಾಗಿ ಇಂಗ್ಲಿಷನ್ನು ಮಕ್ಕಳ ಮೇಲೆ ಹೇರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.
ಬೆಂಗಳೂರಿನಲ್ಲಿರುವ ಕನ್ನಡಪರ ಹೋರಾಟಗಾರರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಓದಿಸುತ್ತಿದ್ದಾರೆ. ಭಾಷೆಯನ್ನಾಗಿ ಇಂಗ್ಲಿಷ್ ಕಲಿಯಲು ತಮ್ಮ ಆಕ್ಷೇಪಣೆ ಇಲ್ಲ. ಭಾಷೆ ಸತ್ತರೆ ತಮ್ಮತನವೇ ನಾಶವಾಗುತ್ತದೆ. ಕನ್ನಡಕ್ಕೆ ಎಲ್ಲ ಭ್ರಮೆಗಳನ್ನು ನಾಶ ಮಾಡುವ ಶಕ್ತಿ ಇಂದಿಗೂ ಇದೆ. ಆದುದರಿಂದ ಕನ್ನಡಿಗರು ತಮ್ಮ ಹೆಂಡತಿಯನ್ನು ಪ್ರೀತಿಸುವಂತೆಯೇ ಕನ್ನಡವನ್ನು ಪ್ರೀತಿಸಬೇಕೆಂದು ಆಗ್ರಹಿಸಿದರು.
ತಾರತಮ್ಯ: ಅಖಿಲ ಭಾರತ ವೀರಶೈವ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತನಾಡಿ, ವೀರಶೈವ ಸಮಾಜದಲ್ಲಿ ಹಲವು ಒಳಪಂಗಡಗಳು ಇವೆ. ಇವುಗಳ ಮಧ್ಯೆ ಇರುವ ತಾರತಮ್ಯದಿಂದ ಸಮಾಜದಲ್ಲಿ ಒಗ್ಗಟ್ಟು ಸಾಧಿಸಲು ಸಾಧ್ಯವಾಗಿಲ್ಲ. ಸಮಾಜದ ಒಳಪಂಗಡಗಳನ್ನು ಒಂದುಗೂಡಿಸಿ ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡಲಾಗುವುದು.
ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ ಮಹಾಸಭೆಗೆ ತಾವು ಅಧ್ಯಕ್ಷರಾಗಿದ್ದು, ಅವುಗಳನ್ನು ರಾಜ್ಯದ ಪ್ರಮುಖ ಮಠಾಧೀಶರ ಮಾರ್ಗದರ್ಶನದಲ್ಲಿ ಸರಿಪಡಿಸಿ ಮಹಾಸಭೆಯನ್ನು ಸುಸ್ಥಿತಿಗೆ ತರುವ ಯತ್ನ ಮಾಡಲಾಗುವುದು. ಲಿಂಗಾಯತ ಸಮಾಜದ ನಾಯಕರೆಂದು ಬಿಂಬಿಸಿಕೊಳ್ಳುತ್ತಿರುವ ನಾಯಕರೊಬ್ಬರು ಮಹಾಸಭೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಮೂಲಕ ತಪ್ಪುಮಾಡಿದರು ಎಂದರು.
ರಾಜ್ಯದ ಹಲವು ಭಾಗಗಳಲ್ಲಿ ವೀರಶೈವ ಮಹಾಸಭಾದಿಂದ ಉಚಿತ ವಿದ್ಯಾರ್ಥಿನಿಲಯಗಳು, ಬಸವಕಲ್ಯಾಣದಲ್ಲಿ ನಿರಂತರ ದಾಸೋಹ ನಡೆಸುವ ಕೆಲಸ ಹಾಗೂ ಬೆಂಗಳೂರು ನಗರದಲ್ಲಿ ಐಎಎಸ್, ಮತ್ತು ಐಪಿಎಸ್ ವ್ಯಾಸಂಗ ಮಾಡುವ ವೀರಶೈವ ಸಮಾಜದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ದಾವಣಗೆರೆ ವಿವಿ ಕುಲಪತಿ ಪ್ರೊ.ಎಸ್. ಇಂದುಮತಿ ಉಪನ್ಯಾಸ ನೀಡಿದರು. ಚಿಕ್ಕಮಗಳೂರಿನ ಬಸವ ಮಂದಿರದ ಜಯಬಸವಾನಂದ ಸ್ವಾಮೀಜಿ, ಸಾಣೇಹಳ್ಳಿ ಪಟ್ಟಾಧ್ಯಕ್ಷ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಕೇಂದ್ರದ ಕಾರ್ಯದರ್ಶಿ ಡಾ.ಎಸ್. ಸಿದ್ಧಯ್ಯ, ಸಾಧು ಸಮಾಜದ ಅಧ್ಯಕ್ಷ ಜಯದೇವಪ್ಪ, ಶಾಸಕ ಬಸವರಾಜನ್, ವಿಶ್ವನಾಥ್, ಎಂ. ಬಸವರಾಜ ನಾಯಕ್, ಎಂ. ಚಂದ್ರಪ್ಪ, ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾವು, ಮಾಜಿ ಶಾಸಕ ಎಚ್. ಆಂಜನೇಯ ಮುಂತಾದವರು ಉಪಸ್ಥಿತರಿದ್ದರು.
ಆರಂಭದಲ್ಲಿ ಬೆಂಗಳೂರಿನ ಬೀನಾ ಬದಾಮಿ ಮತ್ತು ಆಕಾಂಕ್ಷಾ ಬದಾಮಿ ಅವರಿಂದ ಸುಶ್ರಾವ್ಯ ವಚನ ಸಂಗೀತ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement