ಮಹಿಳೆಯೊಂದಿಗೆ ಅನುಚಿತ ವರ್ತನೆ: ಎಸ್ಐ ಸೇರಿ ಮೂವರ ಅಮಾನತು
ಶಿವಮೊಗ್ಗ: ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇರೆಗೆ ನಗರದ ಸಂಚಾರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜಗನ್ನಾಥ್ ಸೇರಿದಂತೆ ಮೂವರು ಸಿಬ್ಬಂದಿಯನ್ನು ಸೋಮವಾರ ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರಕುಮಾರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಸಾಮಾನ್ಯವಾಗಿ ಪೊಲೀಸ್ ಸಿಬ್ಬಂದಿಗೆ ಯಾವ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ಇಲಾಖೆ ಮೊದಲೇ ಸೂಚಿಸಿರುತ್ತದೆ. ಆದರೆ, ಪಿಎಸ್ಐ ಜಗನ್ನಾಥ್ ಹಾಗೂ ಮೂವರು ಸಿಬ್ಬಂದಿ ನಿಗದಿತ ಸ್ಥಳ ಹೊರತಾಗಿ ಬೇರೆ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜತೆಗೆ ಮಹಿಳೆ ಹಾಗೂ ಆಕೆಯ ಮಗನೊಂದಿಗೆ ಅನುಚಿತವಾಗಿ ವರ್ತಿಸಿ, ಮೊಬೈಲ್ ಕಸಿದು ಎಸೆದಿದ್ದಾರೆ ಎಂದು ಆ ಮಹಿಳೆ ಎಸ್ಪಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡು, ಮೇಲ್ನೋಟಕ್ಕೆ ಆರೋಪ ಸಾಬೀತಾಗಿದ್ದರಿಂದ ಪಿಎಸ್ಐ ಹಾಗೂ 3 ಸಿಬ್ಬಂದಿಯನ್ನು ಎಸ್ಪಿ ಅಮಾನತುಗೊಳಿಸಿದ್ದಾರೆ.