ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಇನ್ನೂ ಬಂದಿಲ್ಲ ಸಮವಸ್ತ್ರ
ಆರ್. ತಾರಾನಾಥ್
ಚಿಕ್ಕಮಗಳೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಹಾಸ್ಟೆಲ್ ವಿದ್ಯಾರ್ಥಿಗಳಿಗಿನ್ನೂ ಸಮವಸ್ತ್ರ ಬಂದಿಲ್ಲ!
ಈ ಪರಿಸ್ಥಿತಿ ಕೇವಲ ಒಂದೆರಡು ಜಿಲ್ಲೆಗಳದ್ದಲ್ಲ. ರಾಜ್ಯದ ಬಹುತೇಕ ಜಿಲ್ಲೆಗಳ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡಲು ಬಟ್ಟೆ ಹೊಲಿಯುವ ಕಾಯಕವಿನ್ನೂ ಮುಂದುವರಿದಿದೆ.
ರಾಜ್ಯ ಸರ್ಕಾರ ಪ್ರತಿ ವರ್ಷ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ವಿದ್ಯಾರ್ಥಿಗಳಿಗೆ ಬಟ್ಟೆಗಳನ್ನು ನೀಡುತ್ತದೆ. ಆದರೆ, ಈ ವರ್ಷವಿನ್ನೂ ಬಟ್ಟೆ ವಿತರಣೆಯಾಗಿಲ್ಲ. ಈ ಸಂಬಂಧ ಸಂಬಂಧಿಸಿದ ಇಲಾಖೆಗಳು ಕರ್ನಾಟಕ ಹ್ಯಾಂಡ್ಲೂಮ್ ಡೆವಲಪ್ಮೆಂಟ್ ಕಾರ್ಪೋರೇಷನ್ (ಕೆಎಚ್ಡಿಸಿ)ಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಪ್ರಸಕ್ತ ಶೈಕ್ಷಿಣಿಕ ವರ್ಷದ ಪರೀಕ್ಷೆಗಳು ಮಾರ್ಚ್ ಎರಡನೇ ವಾರದಲ್ಲಿ ಆರಂಭಗೊಳ್ಳಲಿವೆ. ಪರೀಕ್ಷೆಗೆ ಸಿದ್ಧಗೊಳ್ಳುತ್ತಿರುವ ವಿದ್ಯಾರ್ಥಿಗಳು ಹೆಚ್ಚೆಂದರೆ 15-20 ದಿನಗಳ ನಂತರ ತಮ್ಮ ಊರುಗಳಿಗೆ ತೆರಳುತ್ತಾರೆ.
ರಾಜ್ಯಮಟ್ಟದಲ್ಲಿ ಟೆಂಡರ್: ಮೂರು ವರ್ಷಗಳ ಹಿಂದೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಬಟ್ಟೆಗಳನ್ನು ವಿತರಿಸಲು ಜಿಲ್ಲಾಮಟ್ಟದಲ್ಲಿ ಟೆಂಡರ್ ಕರೆಯಲಾಗುತ್ತಿತ್ತು. ಆದರೆ, ಬಟ್ಟೆಗಳ ಗುಣಮಟ್ಟ ಸರಿ ಇಲ್ಲದ ಕಾರಣ ಕೆಎಚ್ಡಿಸಿಯಿಂದ ಬಟ್ಟೆಯನ್ನು ಪೂರೈಸಿ, ಅದನ್ನು ಹೊಲಿಯಲು ಟೆಂಡರ್ ನೀಡಲಾಗುತ್ತಿದೆ. ಆದರೆ, ಕೆಎಚ್ಡಿಸಿಯಿಂದ ಇನ್ನೂ ಶೇ.25ರಷ್ಟು ಬಟ್ಟೆಗಳು ಪೂರೈಕೆಯಾಗಬೇಕಿದೆ.
ಟೆಂಡರ್: ಚಿಕ್ಕಮಗಳೂರು ಸಮೀಪದ ಕುರುವಂಗಿ ಗ್ರಾಮದ ಕೆಎನ್ಎ ಡ್ರೆಸಸ್ ರಾಜ್ಯದ 12 ಜಿಲ್ಲೆಗಳ ವಿದ್ಯಾರ್ಥಿ ನಿಲಯಗಳ ಬಟ್ಟೆಯನ್ನು ಹೊಲಿಯಲು ಟೆಂಡರ್ ಪಡೆದುಕೊಂಡಿದೆ.
ಈ ಬಾರಿ ಜುಲೈನಲ್ಲಿ ಬಟ್ಟೆ ಹೊಲಿಯಲು ಟೆಂಡರ್ ನೀಡಿದ್ದರೆ ಬಟ್ಟೆ ವಿತರಣೆಯಲ್ಲಿ ವ್ಯತ್ಯಯವಾಗುತ್ತಿರಲಿಲ್ಲ. ಆದರೆ, ಬಟ್ಟೆ ಹೊಲಿಯಲು ಟೆಂಡರ್ ನೀಡಿದ್ದೇ ಸೆಪ್ಟೆಂಬರ್ನಲ್ಲಿ ಎಂದು ಕೆಎನ್ಎ ಡ್ರಸಸ್ ಮಾಲೀಕರಾದ ಪುಟ್ಟಮ್ಮ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಬಟ್ಟೆ: ಬಟ್ಟೆ ಹೊಲಿಯಲು ಬೆಳಗಾವಿ ಜಿಲ್ಲೆಯ ಟೆಂಡರ್ ಪಡೆದವರು ಕೈ ಕೊಟ್ಟಿದ್ದರಿಂದ ಈ ಕೆಲಸವನ್ನೂ ಕೆಎನ್ಎ ಡ್ರೆಸಸ್ ಸಂಸ್ಥೆಗೆ ಇತ್ತೀಚೆಗೆ ವಹಿಸಲಾಗಿದೆ. ಬೆಳಗಾವಿ ಜಿಲ್ಲೆಯ ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್ಗಳ 5 ಸಾವಿರ ಮಕ್ಕಳಿಗೆ ಬಟ್ಟೆಗಳನ್ನು ವಿತರಿಸಲಾಗುತ್ತಿದೆ.
ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಹಳೆಯ ವಿದ್ಯಾರ್ಥಿಗಳ ಆಧಾರದ ಮೇಲೆ ಬೇಡಿಕೆಯ ಪಟ್ಟಿ ಸಲ್ಲಿಸಿದರೆ, ಪ್ರಥಮ ಹಂತದ ಬಟ್ಟೆಗಳನ್ನು ಹೊಲಿದುಕೊಡಬಹುದು. ತಡವಾಗಿ ಹಾಸ್ಟೆಲ್ಗೆ ಪ್ರವೇಶ ಪಡೆದವರ ಎರಡನೇ ಪಟ್ಟಿಯನ್ನು ನಂತರದಲ್ಲಿ ನೀಡಿದರೆ, ಇನ್ನುಳಿದರಿಗೆ ಬಟ್ಟೆ ಪೂರೈಸಲು ತೊಂದರೆ ಆಗುವುದಿಲ್ಲ.
ಅಂದರೆ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಕಾಲಕ್ಕೆ ಬಟ್ಟೆಗಳ ಬೇಡಿಕೆಯ ಪಟ್ಟಿ ನೀಡಿದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ.
ಈಗಾಗಲೇ ಶೇ.75ರಷ್ಟು ಬಟ್ಟೆಗಳನ್ನು ಈವರೆಗೆ ಹೊಲಿದು ಕೊಡಲಾಗಿದೆ. ಇನ್ನುಳಿದ ಬಟ್ಟೆಗಳನ್ನು ಆದಷ್ಟು ಬೇಗನೇ ಹೊಲಿದು ಕೊಡಲಾಗುವುದು. ಕಳೆದ 13 ವರ್ಷಗಳಿಂದ ಹಾಸ್ಟೆಲ್ ವಿದ್ಯಾರ್ಥಿಗಳ ಬಟ್ಟೆಗಳನ್ನು ಹೊಲಿಯುತ್ತಿದ್ದು, ಈ ವರ್ಷ ಮಾತ್ರ ಬಹಳ ವಿಳಂಬವಾಗಿದೆ.
ಟಿ ಪುಟ್ಟಮ್ಮ, ಕೆಎನ್ಎ ಡ್ರೆಸ್ ಮಾಲೀಕರು