ಹಣದ ವ್ಯಾಮೋಹದಿಂದ ಆರೋಗ್ಯ ನಿರ್ಲಕ್ಷ್ಯ
ನರಸಿಂಹರಾಜಪುರ: ಇತ್ತೀಚಿನ ವರ್ಷಗಳಲ್ಲಿ ಜನರು ಹಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಾ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಕೊಪ್ಪ ಆದರ್ಶ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅನಿತಾ ನಟರಾಜರಾವ್ ವಿಷಾದ ವ್ಯಕ್ತಪಡಿಸಿದರು.
ಅವರು ಸೋಮವಾರ ಕಮಾಲಾಪುರ ಶಾಲೆಯಲ್ಲಿ ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ಹದಿ ಹರೆಯದ ಆರೋಗ್ಯದ ಸಮಸ್ಯೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಮನಸ್ಸಿಗೂ ಸಂಬಂಧಿತ: ಆರೋಗ್ಯ ಎಂದರೆ ದೇಹಕ್ಕೆ ಮಾತ್ರವಲ್ಲದೆ ಮನಸ್ಸಿಗೂ ಸಂಬಂಧಿಸಿದ್ದಾಗಿದೆ. ಗರ್ಭಿಣಿಯರು ೆಹೆರಿಗೆಯಾದ ನಂತರ 4 ರಿಂದ 6ತಿಂಗಳವರೆಗೆ ಎದೆ ಹಾಲನ್ನು ಮಗುವಿಗೆ ನೀಡಬೇಕು. ಎದೆ ಹಾಲಿನಲ್ಲಿ ರೋಗನಿರೋಧಕ ಶಕ್ತಿ ಇದೆ. ಪ್ರತಿ ಮಗುವಿನ ಅಂತರ ಕನಿಷ್ಠ 3 ವರ್ಷ ಇರಬೇಕು ಎಂದು ಅವರು ಮಹಿಳೆಯರಿಗೆ ಸಲಹೆ ನೀಡಿದರು.
ತಾಲೂಕು ಪಶು ವೈದ್ಯಾಧಿಕಾರಿ ಡಾ. ವಿಜಯ ಕುಮಾರ್ ಪಶುಪಾಲನೆ, ಆರೋಗ್ಯ ಹಾಗೂ ಆರ್ಥಿಕತೆ ಬಗ್ಗೆ ಉಪನ್ಯಾಸ ನೀಡಿ, ಪಶುಪಾಲನೆಯನ್ನು ವೈಜ್ಞಾನಿಕವಾಗಿ ಮಾಡಿದರೆ ಹೈನುಗಾರಿಕೆ ಲಾಭದಾಯಕವಾಗಲಿದೆ.
ದನದ ಕೊಟ್ಟಿಗೆಯಲ್ಲಿ ಯಾವಾಗಲೂ ಬೆಳಕು, ಗಾಳಿ ಚೆನ್ನಾಗಿ ಬರುವಂತೆ ನೋಡಿಕೊಳ್ಳಬೇಕು. ಮಲೆನಾಡು ಭಾಗದಲ್ಲಿ ಜಾನವಾರುಗಳಿಗೆ ಕಾಲುಬಾಯಿ ಜ್ವರ, ಥಂಡಿ ಕಾಯಿಲೆ ಜಾಸ್ತಿ ಇರುವುದರಿಂದ ರೈತರು ಎಚ್ಚರಿಕೆಯಿಂದ ಕಾಲ, ಕಾಲಕ್ಕೆ ಮುಂಜಾಗ್ರತೆಯಾಗಿ ಚುಚ್ಚು ಮದ್ದು ಹಾಕಿಸಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಅಧ್ಯಕ್ಷತೆಯನ್ನು ಕೃಷಿಕ ಯಡಗೆರೆ ವೈ.ಎಸ್. ಗಣೇಶ್ ವಹಿಸಿದ್ದರು. ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ವಾಣಿಸತೀಶ್, ಕೊಪ್ಪ ಮಹಿಳಾ ಸಾಧನಾ ಸಹಕಾರ ಸಂಘದ ಅಧ್ಯಕ್ಷೆ ಪ್ರಭಾ ಪ್ರಕಾಶ್, ಕಮಾಲಾಪುರ ಶಾಲೆಯ ಎಸ್.ಡಿ.ಎಂ.ಸಿ. ಸದಸ್ಯೆ ವಸಂತಿ ರಮೇಶ್, ಕೃಷಿಕ ಯಡಗೆರೆ ವೈ.ಕೆ. ವೆಂಕಟರಮಣ, ವೈ.ವಿ. ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.
ಐಶ್ವರ್ಯ ಸ್ವಾಗತಿಸಿದರು. ರಕ್ಷಿತ ಹಾಗೂ ಸುಪ್ರಿಯ ಕಾರ್ಯಕ್ರಮ ನಿರೂಪಿಸಿದರು.ಮೇಘಾ ವಂದಿಸಿದರು.