ಕೇಂದ್ರ ಗ್ರಾಮ ಸಡಕ್ ಯೋಜನೆಗೆ ಹಣ ನೀಡಿಲ್ಲ: ಶಾಸಕ ವಿಶ್ವನಾಥ್
ಬೀರೂರು: ಮಾಜಿ ಪ್ರಧಾನಿ ವಾಜಪೇಯಿಯವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದ್ದ ಗ್ರಾಮ ಸಡಕ್ ಯೋಜನೆಗೆ ಕೇಂದ್ರದ ಯುಪಿಎ ಸರ್ಕಾರ 2008 ರಿಂದ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಶಾಸಕ ಡಾ. ವೈ.ಸಿ ವಿಶ್ವನಾಥ್ ಹೇಳಿದರು.
ಕಡೂರು ತಾಲೂಕಿನ ಹೋರಿತಿಮ್ಮನಹಳ್ಳಿ, ಗೋಪಾಲಪುರ, ಬೆಳ್ಳಿಗುತ್ತಿ, ಮುಸ್ಲಾಪುರದಹಟ್ಟಿ, ಹನುಮಂತಪುರ ಮತ್ತಿತರ ಗ್ರಾಮಗಳಲ್ಲಿ ಎರಡನೇ ಹಂತದ ನಮ್ಮ ಗ್ರಾಮ ನಮ್ಮರಸ್ತೆ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕಾಮಗಾರಿಗಳಿಗೆ ಹಣ ಮಂಜೂರು ಮಾಡಲು ವಿಳಂಬ ನೀತಿ ಅನುಸರಿಸಿದ್ದರಿಂದ ರಸ್ತೆಗಳ ಕಾಮಗಾರಿಗಳನ್ನು ಮಾಡಲು ಆಗುತ್ತಿರಲಿಲ್ಲ. ಇದನ್ನು ಮನಗಂಡು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಮ್ಮ ಬಿಜೆಪಿ ಸರ್ಕಾರವು ನಮ್ಮ ಗ್ರಾಮ ನಮ್ಮ ರಸ್ತೆ ಎಂಬ ಯೋಜನೆಯನ್ನು ಅನುಷ್ಠಾನಕ್ಕೆ ತಂದಿತು.
ಸಿಎಮ್ಜಿಎಸ್ವೈ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 30 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕಡೂರು ಕ್ಷೇತ್ರದ ವಿವಿಧ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು.
ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಜಿ.ಪಂ. ಉಪಾಧ್ಯಕ್ಷೆ ಮಾಲಿನಿಬಾಯಿ ರಾಜಾನಾಯ್ಕ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಮಂಜುನಾಥ್, ಜೆ.ಇ. ಲೋಕೇಶ್, ಹರೀಶ್ ಮತ್ತಿತರರು ಹಾಜರಿದ್ದರು.