ಶೃಂಗೇರಿ- 3 ಪಪಂನಲ್ಲಿ ಬಿಜೆಪಿ ಬಹುಮತ: ಜೀವರಾಜ್
ಕೊಪ್ಪ: ಪಪಂ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದ ಮೂರು ಪಪಂಗಳಲ್ಲಿ ಸ್ಪಷ್ಟ ಬಹುಮತ ಪಡೆದು ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್. ಜೀವರಾಜ್ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪ ಪಪಂನ 4ನೇ, ವಾರ್ಡ್ನ ಜೆಡಿಎಸ್ ಅಭ್ಯರ್ಥಿಗೆ ಬಿಜೆಪಿಯಿಂದ ಯಾವುದೇ ಆಮಿಷ ಒಡ್ಡಿಲ್ಲ. ಅದರೆ ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ಮುಖಂಡರು ದಾಖಲೆ ರಹಿತ ಆರೋಪಗಳನ್ನು ಮಾಡುವುದರ ಮೂಲಕ ಬಿಜೆಪಿ ವರ್ಚಸ್ಸಿಗೆ ಧಕ್ಕೆ ತರುವ ಹುನ್ನಾರ ನಡೆಸುತ್ತಿದ್ದಾರೆ ಎಂದ ಸಚಿವರು ಇದೇ ರೀತಿ ಮುಂದೆಯೂ ಆರೋಪಗಳನ್ನು ಮಾಡಿದಲ್ಲಿ ಕಾನೂನು ರೀತಿಯಲ್ಲಿ ಉತ್ತರ ನೀಡುವುದಾಗಿ ಎಚ್ಚರಿಸಿದರು.
ಮೊದಲನೇ ಹಂತದ ಮತದಾರ ಭೇಟಿಯ ಸಂದರ್ಭದಲ್ಲಿ ಬಿಜೆಪಿಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದರು. ಹಳದಿ ಅಡಕೆ ಬೆಳೆಗಾರರ ಸಾಲ ಮನ್ನಾಕ್ಕೆ 1400 ಕೋಟಿ ಮೀಸಲಿಡಲು ಮತ್ತು ಗೋರಕ್ ಸಿಂಗ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಒತ್ತಾಯಿಸಿ ಶೃಂಗೇರಿ ಮತ್ತು ಕೊಪ್ಪ ತಾಲೂಕು ಕಚೇರಿಯ ಮುಂದೆ ಬಿಜೆಪಿ ವತಿಯಿಂದ 2 ದಿನ ನಡೆಸಿದ ಧರಣಿ ಸತ್ಯಾಗ್ರಹ ಪೂರ್ಣಗೊಂಡಿದ್ದು, ಧರಣಿಗೆ ಪಕ್ಷತೀತಾವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಬರುವ ಕೇಂದ್ರ ಬಜೆಟ್ನಲ್ಲಿ ಸ್ಪಷ್ಟವಾಗಿ ಗೋರಕ್ ಸಿಂಗ್ ವರದಿ ಜಾರಿಗೆ ಈ ಸಮಯದಲ್ಲಿ ಈ ಕ್ಷೇತ್ರದ ಶಾಸಕನಾಗಿ ಒತ್ತಾಯ ಮಾಡುತ್ತಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಸ್.ಎನ್. ರಾಮಸ್ವಾಮಿ, ಅದ್ದಡ ಸತೀಶ್, ನಿಲೇಶ್, ಮನು ಮತ್ತಿತರರು ಹಾಜರಿದ್ದರು.