ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಆತ್ಮವಿಶ್ವಾಸದಿಂದ ಮತಯಾಚನೆ

Rashmi Kasaragodu
Updated On : 1 Mar 2013, 10:44 am

ಚಿಕ್ಕಮಗಳೂರು: ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರ ವಿಶ್ವಾಸ ಗಳಿಸಿ ಆತ್ಮವಿಶ್ವಾಸದಿಂದ ಮತ ಯಾಚನೆ ಮಾಡುತ್ತಿದ್ದೇವೆ. ಮತದಾರರು ಬಿಜೆಪಿ ಆಡಳಿತ ನೋಡಿ ಮತ್ತೆ ಪಕ್ಷವನ್ನು ಗೆಲ್ಲಿಸಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಮತಯಾಚನೆ: ನಗರದ ಕೋಟೆಯ ಅಕ್ಷಯ ವೃತ್ತದಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸಗಳ ಮೂಲಕ ಮತಯಾಚಿಸುತ್ತಿದ್ದೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ 50 ವರ್ಷಗಳಿಂದ ಯಾವುದೇ ಅಭಿವೃದ್ಧಿ ಮಾಡದೆ ಮತಯಾಚನೆ ಮಾಡುತ್ತಿವೆ. ಅಪಪ್ರಚಾರದ ಮೂಲಕ ಮತ ಕೇಳುವುದನ್ನು ಬಿಟ್ಟು ನ್ಯಾಯಯುತವಾಗಿ ಚುನಾವಣೆ ಎದುರಿಸಲಿ ಎಂದರು.
ಡಾಂಬರೀಕರಣ: ಜಿಲ್ಲೆಯಾದ್ಯಂತ ಜನರಲ್ಲಿ ವಿಷ ಬೀಜ ಬಿತ್ತದೆ, ಜಾತಿ ರಾಜಕಾರಣ ಮಾಡದೆ ಪ್ರೀತಿ ರಾಜಕಾರಣ ಮಾಡಿದ್ದೇವೆ. ಹೋರಾಟದ ಮೂಲಕ ಈ ಮಟ್ಟಕ್ಕೆ ಬಂದ ನನಗೆ ಬೆಂಬಲಿಸಿದ ನೀವು ಮುಂದೆಯೂ ಬೆಂಬಲಿಸುವಿರೆಂಬ ನಂಬಿಕೆ ಇದೆ ಎಂದು ಮತದಾರರಿಗೆ ತಿಳಿಸಿದರು. ನಗರದ 167 ಕಿ.ಮೀ. ರಸ್ತೆ ಡಾಂಬರೀಕರಣಗೊಳ್ಳುವುದರ ಜೊತೆಗೆ ನಗರದ ಎಲ್ಲಾ ಮೂಲೆಗೆ ಯುಜಿಡಿ ಸಂಪರ್ಕ ದೊರೆತಿದೆ. ಮಾರ್ಕೆಟ್ ರಸ್ತೆ ಮತ್ತು ಎಂ.ಜಿ. ರಸ್ತೆಗಳ ಕಾಂಕ್ರೀಟೀಕರಣಕ್ಕೆ 20 ಕೋಟಿ ರು. ಅನುದಾನ ತಂದಿದ್ದೇನೆ. ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ ವಿಶೇಷ ಅನುದಾನವಾಗಿ 50 ಕೋಟಿ ರು.ಗಳನ್ನು ತರಲಾಗಿದೆ ಎಂದರು.
ಎಂಜಿನಿಯರಿಂಗ್ ಕಾಲೇಜು: ಮಂಗಳೂರಿಗೆ ಉಸ್ತುವಾರಿ ಸಚಿವರಾಗಿ ಹೋದಾಗ ಎಂಜಿನಿಯರಿಂಗ್ ಕಾಲೇಜು ಇರುವುದನ್ನು ಕಂಡು ನಮ್ಮ ಜಿಲ್ಲೆಗೂ ಇದೇ ರೀತಿಯಲ್ಲಿ ಹೆಚ್ಚಿನ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು ಎಂಬ ಸಂಕಲ್ಪ ಮಾಡಿ ಅದರಂತೆ ಜಿಲ್ಲೆಗೆ ಕಾಲೇಜು ಮಂಜೂರು ಮಾಡಿಸಿದ್ದೇನೆ. ಅಲ್ಲದೆ ಮೆಡಿಕಲ್ ಕಾಲೇಜಿಗೂ ಮಂಜೂರಾತಿ ನೀಡಿದ್ದು, ಜಿಲ್ಲಾಸ್ಪತ್ರೆ ಉನ್ನತೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸಾಧನೆ: ನಗರಾಧ್ಯಕ್ಷ ಕೋಟೆ ರಂಗನಾಥ್ ಮಾತನಾಡಿ, ಸಗೀರ್ ಅಹ್ಮದ್ ಅವರು ಸಚಿವರಾಗಿದ್ದಾಗ ಒಂದು ಸಾವಿರ ಮನೆಗಳನ್ನೂ ನೀಡಲಿಲ್ಲ. ಆದರೆ. ಸಿ.ಟಿ. ರವಿಯವರು ಶಾಸಕರಾಗಿದ್ದಾಗಲೇ 14,800 ಮನೆಗಳನ್ನು ಬಡವರಿಗೆ ನೀಡಿರುವುದು ಸಾಧನೆಯೇ ಸರಿ ಎಂದರು. ಸ್ಥಳೀಯರಾದ ಜಯಣ್ಣ ಮಾತನಾಡಿ, ಅಭಿವೃದ್ಧಿ ಕೆಲಸಗಳ ರವಿಕಿರಣ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿ, ಶಾಸಕರಿಗೆ ನಗರಸಭೆ ಕುರಿತಂತೆ ಯಾವುದೇ ಸಮಸ್ಯೆಗಳನ್ನು ತಿಳಿಸಿದರೂ ತಕ್ಷಣ ಸ್ಪಂದಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷ ಬೋಜೇಗೌಡ, ಜಿಪಂ ಸದಸ್ಯೆ ಭಾಗ್ಯ ರಂಗನಾಥ್, ಅಭ್ಯರ್ಥಿಗಳಾದ ವನಿತಾ, ಕೋಟೆ ಕೃಷ್ಣ, ರಾಜೇಂದ್ರ ರಾಜ್ ಅರಸ್, ಮುಖಂಡ ವಿಶ್ವನಾಥ್ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement