ಭ್ರಷ್ಟಾಚಾರ ಮುಕ್ತ ಆಡಳಿತ ಕೆಜೆಪಿ ಗುರಿ
ಕಡೂರು: ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತ, ದಿನದ 24 ಗಂಟೆ ಶುದ್ಧ ಕುಡಿಯುವ ನೀರು, ಬಡವರು ಅಲ್ಪಸಂಖ್ಯಾತರ ಆಸ್ತಿ ರಕ್ಷಣೆ, ಬಡವರಿಗೆ ಮನೆ, ಹಸಿರೀಕರಣಕ್ಕೆ ಆದ್ಯತೆ ಇದು ಕಡೂರು ಪಟ್ಟಣದ ಜನರಿಗೆ ಕೆಜೆಪಿ ಪಕ್ಷ ನೀಡಿರುವ ಪುರಸಭೆಯ ಚುನಾವಣೆ ಪ್ರಣಾಳಿಕೆಯ ಭರವಸೆಗಳು.
ಪ್ರಣಾಳಿಕೆ ಬಿಡುಗಡೆ ಮಾಡಿದ ತಾಲೂಕು ಸಂಚಾಲಕ ಕಾಮನಕೆರೆ ಶಶಿಧರ್, ಬೆಳ್ಳಿ ಪ್ರಕಾಶ್ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿ ಎಲ್ಲ ವರ್ಗಗಳ ಅಭಿವೃದ್ಧಿಗೆ ದುಡಿದು ಬಡವರ ಶೋಷಿತರ ನೋವಿಗೆ ಸ್ಪಂದಿಸುವ ಮೂಲಕ ಜನಪ್ರಿಯ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಯಡಿಯೂರಪ್ಪನವರು ಪಟ್ಟಣಗಳ ಅಭಿವೃದ್ಧಿಗಾಗಿ ಪ್ರತೀ ಪುರಸಭೆಗೆ ತಲಾ 5 ಕೋಟಿರು. ಅನುದಾನ ನೀಡಿ ಪುರಸಭೆಗಳು ಸ್ವಾವಲಂಬಿ ಆಡಳಿತ ನಡೆಸುವಂತೆ ಮಾಡಿದ್ದಾರೆ ಎಂದರು.
ಕಡೂರು ಪುರಸಭೆಯಲ್ಲಿ ಆಡಳಿತ ನಡೆಸಿದ ಪಕ್ಷಗಳ ಆಡಳಿತದ ನ್ಯೂನತೆಯನ್ನು ಪಟ್ಟಣದ ಜನತೆ ನೋಡಿ ಬೇಸತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಜೆಪಿ ಜನಪರ ಸೇವೆ ಮಾಡುವ ಸಂಕಲ್ಪ ತೊಟ್ಟು ಕಣಕ್ಕಿಳಿದಿದೆ. ಪ್ರಣಾಳಿಕೆಯಂತೆ ಪುರಸಭೆಯಲ್ಲಿ ಪಾರದರ್ಶಕ ಆಡಳಿತ ಭ್ರಷ್ಟಮುಕ್ತ ಆಡಳಿತ ಪಕ್ಷದ ಪ್ರಮುಖ ಉದ್ದೇಶವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕುರುಬಗೆರೆ ಮಹೇಶ್, ಶಂಕರಮೂರ್ತಿ, ಬೀರೂರು ಕೆಜೆಪಿ ಮುಖಂಡ ರವಿಕುಮಾರ್, ಪ್ರುಭು, ವರದರಾಜ್ ಇದ್ದರು.