ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಅಂಗವಿಕಲರೆಂದೇ ಕರೆಯಿರಿ'

Lingaraj Badiger
Updated On : 22 Jan 2013, 1:28 am

ಚಿಕ್ಕಮಗಳೂರು: ಅಂಗವಿಕಲರನ್ನು ವಿಕಲಚೇತನರು, ದೈಹಿಕ ಅಸಮರ್ಥರು ಎಂದು ಸಂಭೋದಿಸದೇ ಅವರನ್ನು ಅಂಗವಿಕಲರೆಂದೇ ಕರೆಯುವಂತೆ ಧಾರವಾಡ ಜಿಲ್ಲೆ ಮನುಗುಂಡಿ ಮಹಾಮನೆಯ ಬಸವಾನಂದ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಜೆ ನಡೆದ ಆಶಾಕಿರಣ ಅಂಧಮಕ್ಕಳ ಶಾಲೆಯ ವಾರ್ಷಿಕೋತ್ಸವ ಮತ್ತು ರಾಷ್ಟ್ರೀಯ ಅಂಧರ ಅಥ್ಲೆಟಿಕ್ಸ್‌ನಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಅಂಗವಿಕಲರನ್ನು ಇತ್ತೀಚೆಗೆ ವಿಕಲಚೇತನರು ಮತ್ತು ಫಿಸಿಕಲಿ ಚಾಲೆಂಜ್ಡ್ ಪರ್ಸನ್ಸ್ ಎಂದು ಕರೆಯಲಾಗುತ್ತಿರುವುದು ಮತ್ತು ಅದೇ ಹೆಸರನ್ನು ರಾಜ್ಯ ಸರ್ಕಾರದ ಇಲಾಖೆಗೆ ಇಟ್ಟಿರುವುದು ಸರಿಯಲ್ಲ ಎಂದರು.  
ಯಾವುದೇ ಚೇತನಕ್ಕಾಗಲಿ, ಶಕ್ತಿಗಾಗಲಿ, ಮನಸ್ಸಿಗಾಗಲಿ ಅಥವಾ ಆತ್ಮಕ್ಕಾಗಲಿ ವಿಕಲತೆ ಇರುವುದಿಲ್ಲ. ಅಂಗಕ್ಕೆ ಮಾತ್ರ ವಿಕಲತೆ ಇರುತ್ತದೆ. ಅಂಗವಿಕಲರು ದೈಹಿಕವಾಗಿ ಸಮರ್ಥರಲ್ಲ. ಈ ಹಿನ್ನೆಲೆಯಲ್ಲಿ ಅಂಗವಿಕಲರನ್ನು ಈ  ಹಿಂದೆ ಕರೆಯುತ್ತಿದ್ದಂತೆ ಅಂಗವಿಕಲರೆಂದೇ ಕರೆಯಬೇಕು ಎಂದು ಸಲಹೆ ಮಾಡಿದರು.
ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಗೋಬರ್ ಗ್ಯಾಸ್ ಘಟಕ ಮತ್ತು ನೀರು ಮರು ಶುದ್ದೀಕರಣ ಘಟಕಗಳನ್ನು ಅಳವಡಿಸುವಂತೆ ಸಲಹೆ ಮಾಡಿದ ಸ್ವಾಮೀಜಿ, ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಹಾಯವನ್ನು ತಮ್ಮ ಮಠದಿಂದ ಒದಗಿಸಿಕೊಡುವುದಾಗಿ ಹೇಳಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಆಶಾಕಿರಣ ಶಾಲೆಯ ಮಕ್ಕಳು ಚಿನ್ನದ ಪದಕಗಳನ್ನು ಗಳಿಸಿರುವುದು ಜಿಲ್ಲೆಗೆ ಹೆಮ್ಮೆ ಮತ್ತು ಕೀರ್ತಿ ತಂದಿದೆ ಎಂದರು.
ದೆಹಲಿಯಲ್ಲಿ ಇತ್ತಿಚೆಗೆ ನಡೆದ ರಾಷ್ಟ್ರೀಯ ಅಂಧರ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಸೇರಿದಂತೆ 36 ಪದಕಗಳನ್ನು ಗಳಿಸುವ ಮೂಲಕ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ ಶಾಲೆಯ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ನಾಗರಿಕ ಸನ್ಮಾನ ಮಾಡಲಾಯಿತು.  
ಇತ್ತೀಚೆಗೆ ನಿಧನರಾದ ಆದಿಚುಂಚನಗಿರಿ ಮಹಾಸಂಸ್ಥಾನದ ಬಾಲಗಂಗಾಧರನಾಥ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.  
ವಸ್ತ್ರ ವಿತರಣೆ: ಜೋಳ್ದಾಳ್ ಕುಟುಂಬದಿಂದ ಶಾಲೆಯ ಮಕ್ಕಳಿಗೆ ವಸ್ತ್ರಗಳನ್ನು ವಿತರಿಸಲಾಯಿತು. ನಗರಸಭೆ ಅಧ್ಯಕ್ಷ ಸಿ.ಆರ್.  ಪ್ರೇಂಕುಮಾರ್, ಶಾಲೆಯ ಖಜಾಂಚಿ ಎಚ್.ಸಿ. ಮಹೇಶ್ ಮಾತನಾಡಿದರು. ಡಾ. ಸಿದ್ಧಯ್ಯ ಪುರಾಣಿಕರ ಜೀವನ ಮತ್ತು ಸಾಹಿತ್ಯದ ಕುರಿತು ಬೆಳವಾಡಿ ಮಂಜುನಾಥ್ ಉಪನ್ಯಾಸ ನೀಡಿದರು.  
ಮೈಸೂರಿನ ನಿವೃತ್ತ ಅಂಧ ಶಿಕ್ಷಕ ಟಿ.ವಿ. ನಾಗರಾಜ್ ಅವರಿಗೆ ಲೂಯಿ ಬ್ರೈಲ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಶಾಲೆಯ ದೈಹಿಕ ಶಿಕ್ಷಕ ಬಿ.ಎಲ್. ಗೋಪಾಲ್ ಅವರನ್ನು ಸನ್ಮಾನಿಸಲಾಯಿತು.  
ಆಶಾಕಿರಣ ಅಂಧಮಕ್ಕಳ ಶಾಲೆ ಅಧ್ಯಕ್ಷ ಡಾ.ಜೆ.ಪಿ. ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಾಫಿ ಬೆಳೆಗಾರ ಎಂ.ಆರ್. ಸಣ್ಣಸಿದ್ದೇಗೌಡ, ಡಾ. ಜ್ಯೋತಿ ಕೃಷ್ಣ, ಎಐಟಿ ಪ್ರಾಂಶುಪಾಲ ಡಾ.ಸಿ.ಕೆ. ಸುಬ್ರಾಯ, ಜಿಲ್ಲಾ ಕಸಾಪ ಅಧ್ಯಕ್ಷ ಎನ್.ಎಸ್. ಶಿವಸ್ವಾಮಿ, ಶಾಲೆಯ ಕಾರ್ಯದರ್ಶಿ ನಸ್ರುಲ್ಲಾ ಶರೀಫ್, ಉಪಾಧ್ಯಕ್ಷೆ ಗೌರಮ್ಮ ಬಸವೇಗೌಡ ಉಪಸ್ಥಿತರಿದ್ದರು.  
ಶಾಲೆಯ ಪ್ರಾಚಾರ್ಯ ಬಿ.ಜಿ. ಚಂದ್ರಶೇಖರ್ ಸ್ವಾಗತಿಸಿದರು. ಲಕ್ಷ್ಮಣಗೌಡ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement