ಅಭಿವೃದ್ಧಿ ಕಂಡು ವಿರೋಧ ಪಕ್ಷಗಳಿಗೆ ನಡುಕ
ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ: ಸಿ.ಟಿ. ರವಿ, ಸಚಿವರಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ
ಚಿಕ್ಕಮಗಳೂರು: ಕ್ಷೇತ್ರದ ಮೂಲೆ ಮೂಲೆಯಲ್ಲೂ ಆಗಿರುವ ಮತ್ತು ಆಗುತ್ತಿರುವ ಶಾಶ್ವತ ಅಭಿವೃದ್ಧಿ ಕೆಲಸಗಳನ್ನು ಕಂಡು ವಿರೋಧ ಪಕ್ಷಗಳಿಗೆ ಟೀಕೆ ಮಾಡಲಾಗದೆ ನಡುಕ ಹುಟ್ಟಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಅಭಿವೃದ್ಧಿ ಕೆಲಸ: ನಗರದ ಹೊರ ವಲಯದಲ್ಲಿರುವ ಕಲ್ಲುದೊಡ್ಡಿ ಆಶ್ರಯ ಬಡಾವಣೆಯಲ್ಲಿ ವಿವಿಧ ಯೋಜನೆಯಡಿ 1.5 ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿ, ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಕೀಯವನ್ನು ಬೆರೆಸಲು ಇಷ್ಟಪಡುವುದಿಲ್ಲ, ಹಿಂದಿನ ಮತ್ತು ಇಂದಿನ ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸ ನಿಮ್ಮ ಮುಂದಿದೆ. ಒಳ್ಳೆಯದಾಗಿದ್ದರೆ ಪ್ರೋತ್ಸಾಹಿಸಿ, ಸರಿಯಿಲ್ಲದಿದ್ದರೆ ಬುದ್ದಿಮಾತು ಹೇಳಿ ಎಂದ ಅವರು, ನನ್ನ ರಾಜಕೀಯ ಜೀವನದಲ್ಲಿ ವಿರೋಧಿಗಳಿಗೂ ಕೆಡುಕನ್ನು ಬಯಸಿಲ್ಲ, ನನ್ನನ್ನು ನಂಬಿದ ಮತದಾರ ಪ್ರಭುಗಳಿಗೆ ಕೆಟ್ಟದ್ದು ಮಾಡಬೇಕು ಎನ್ನುವ ಆಲೋಚನೆಯೂ ಇಲ್ಲ ಎಂದರು.
ಶತ ಪ್ರಯತ್ನ: ಅಭಿವೃದ್ಧಿ ಬಗ್ಗೆ ವಿರೋಧ ಪಕ್ಷಗಳಿಗೆ ಮಾತನಾಡಲು ಉಸಿರಿಲ್ಲದೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಕೆಲವು ಸುಳ್ಳುಗಳನ್ನು ಹೇಳಿ ನಿಜ ಮಾಡಲು ಶತ ಪ್ರಯತ್ನ ಪಡುತ್ತಿದ್ದಾರೆ. ಅದನ್ನು ಪರೀಕ್ಷಿಸಿ ನಿರ್ಧರಿಸುವವರು ನೀವು ಎಂದ ಅವರು, ರಾಜನು ಭೂಮಿ ಮೇಲೆ ಶಾಶ್ವತವಲ್ಲ, ಆಳು ಶಾಶ್ವತವಲ್ಲ, ನೀವು ಕೊಟ್ಟ ಅವಕಾಶದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಮಾತ್ರ ಶಾಶ್ವತ ಎಂಬ ಅರಿವು ನನಗಿದೆ ಎಂದರು.
ಬಾಕ್ಸ್ ಚರಂಡಿ: ಕೆಎಂಆರ್‌ಪಿ, ಬಿಆರ್‌ಪಿ, ಸಿಎಂಎಸ್‌ಟಿಡಿಪಿ ಸೇರಿದಂತೆ ವಿವಿಧ ಯೋಜನೆಯಡಿ ಈ ಭಾಗದ ಆಶ್ರಯ ಬಡಾವಣೆಯನ್ನು 5 ಕೋಟಿ ರು.ಗೂ ಹೆಚ್ಚು ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಈ ಸಾಲಿನಲ್ಲಿ 2.5 ಕೋಟಿ ರು. ವ್ಯಯಿಸಿದ್ದು, ಇಂದು ಕಲ್ಲುದೊಡ್ಡಿಗೆ 1.5 ಕೋಟಿ ರು. ನಲ್ಲಿ ಇಲ್ಲಿನ ಎಲ್ಲಾ ರಸ್ತೆಗಳನ್ನು ಮೆಟ್ಲಿಂಗ್ ಮತ್ತು ಕಾಂಕ್ರೀಟಿಕರಣ ಮಾಡಿ ಅಭಿವೃದ್ಧಿಪಡಿಸುವ ಜೊತೆಗೆ ಬಾಕ್ಸ್ ಚರಂಡಿ ನಿರ್ಮಿಸಲಾಗುತ್ತಿದ್ದು, ಮುಂದಿನ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಪ್ರೇಮ್‌ಕುಮಾರ್ ಮಾತನಾಡಿ, ಈ ಪ್ರದೇಶದಲ್ಲಿ ನೀರು, ರಸ್ತೆ, ವಿದ್ಯುತ್ ದೀಪದಂತಹ ಸೌಕರ್ಯಗಳು ಹಿಂದಿನ ಸರ್ಕಾರಗಳಲ್ಲಿ ಮರಿಚಿಕೆಯಾಗಿತ್ತು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಿ.ಟಿ. ರವಿಯವರು ಕ್ಷೇತ್ರದ ಎಲ್ಲಾ ಕಾಲೋನಿಗಳಿಗೆ ಕಾಂಕ್ರೀಟ್ ರಸ್ತೆ ಸೇರಿದಂತೆ ಮೂಲ ಸೌಲಭ್ಯ ನೀಡಿ ಬಡವರ್ಗದ ಜನರಿಗೆ ಒತ್ತು ನೀಡಿ ಸಹಕರಿಸಲಾಗಿದೆ. ಇಂದು ಅಭಿವೃದ್ಧಿ ಪಡಿಸಲಾಗುತ್ತಿರುವ ಅನುದಾನ ಪೂರ್ಣ ರಾಜ್ಯ ಸರ್ಕಾರದ್ದು ಎಂದು ತಿಳಿಸಿದರು.
ಸಿಡಿಎ ಅಧ್ಯಕ್ಷ ಬಿ. ರಾಜಪ್ಪ, ಆಶ್ರಯ ಸಮಿತಿ ಅಧ್ಯಕ್ಷ ಮುತ್ತಯ್ಯ, ಸದಸ್ಯ ಮನೋಹರ್, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಮಹಮ್ಮದ್ ಅನ್ವರ್, ಪ್ರಧಾನ ಕಾರ್ಯದರ್ಶಿ ಸಿ.ಎ. ದಾವೂದ್, ಜೋಸೆಫ್, ಎಸ್‌ಡಿಎಂಸಿ ಅಧ್ಯಕ್ಷ ಗಣೇಶ್, ರಿಜ್ವಾನ್, ಶಿವು ಇದ್ದರು.