ಎಸ್.ನಾರಾಯಣರಾವ್ ಸ್ಮರಣಾರ್ಥನುಡಿನಮನ
ತರೀಕೆರೆ: ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಲಕ್ಕವಳ್ಳಿ ಹೋಬಳಿ ಕಸಾಪದಿಂದ ಲಕ್ಕವಳ್ಳಿ ಹೋಬಳಿ ಪೂರ್ವಾಧ್ಯಕ್ಷರು ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಶಿಕ್ಷಕ ದಿ.ಎಸ್.ನಾರಾಯಣರಾವ್ ಸ್ಮರಣಾರ್ಥ ನುಡಿ ನಮನ ಕಾರ್ಯಕ್ರಮವನ್ನು ಲಕ್ಕವಳ್ಳಿ ವಿಠಲ್ ರುಕ್ಮಾಯಿ ಸಭಾ ಭವನದಲ್ಲಿ ಏರ್ಪಡಿಸಲಾಗಿತ್ತು.
ಡಾ.ಟಿ.ಜಿ. ಪ್ರಸಾದ್ ನಾರಾಯಣರಾವ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಎನ್.ಆರ್. ಮೇಷ್ಟ್ರು ಎಂದೇ ಖ್ಯಾತಿ ಪಡೆದ ಅವರು ವ್ಯಕ್ತಿಯಾಗಿರದೆ ಒಂದು ಶಕ್ತಿಯಾಗಿದ್ದರು ಎಂದರು. ಪ್ರಾಚಾರ್ಯ ಆರ್. ರಾಜಣ್ಣಗೌಡ ಮಾತನಾಡಿ, ಶಿಕ್ಷಕ ವೃತ್ತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು, ವಿದ್ಯಾರ್ಥಿಗಳ ಅಭಿವೃದ್ಧಿಗೆ ಸದಾ ಗಮನ ಹರಿಸುತ್ತಿದ್ದರು ಎಂದು ತಿಳಿಸಿದರು.
ಲಕ್ಕವಳ್ಳಿ ಹೋಬಳಿ ಮಾಜಿ ಅಧ್ಯಕ್ಷ ಶಿವಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಪಂ ಸದಸ್ಯ ಅನ್ಬು, ಕನ್ನಡಶ್ರೀ ಬಿ.ಎಸ್. ಭಗವಾನ್, ಜಿ.ಎಸ್. ಸುಬ್ರಹ್ಮಣ್ಯ, ನಾಗೇಶ್, ಹೋಬಳಿ ಕಸಾಪ ಅಧ್ಯಕ್ಷೆ ಸಂದ್ಯಾ ದತ್ತಾತ್ರಿ, ಮಂಜುಳಾ ಬಾಯಿ ಮಾತನಾಡಿದರು.