ಜನಪದ ಸಾರವೇ ವಚನ ಸಾಹಿತ್ಯ: ಪುಟ್ಟರಾಜು
ತರೀಕೆರೆ: ಜನಪದದ ಸಾರವೇ ವಚನ ಸಾಹಿತ್ಯ ಎಂದು ಸಾಹಿತಿ ಪುಟ್ಟರಾಜು ತಿಳಿಸಿದ್ದಾರೆ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಶಿವನಿ ಗ್ರಾಮದಲ್ಲಿ ಏರ್ಪಡಿಸಿದ್ದ ದಿ.ಪಟೇಲ್ ಪುಟ್ಟೇಗೌಡ ದತ್ತಿ ಉಪನ್ಯಾಸದಲ್ಲಿ ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ವಿಷಯ ಕುರಿತು ಉಪನ್ಯಾಸ ನೀಡಿ, ಜೀವನಾನುಭವವೇ ಜನಪದವಾಗಿದ್ದು ಜನಪದದ ಮೂಲಕ ವಚನ ಸಾಹಿತ್ಯ ರೂಪುಗೊಂಡಿದೆ, ರಾಜಾಶ್ರಯ, ಅರಸೊತ್ತಿಗೆಯಿಂದ ಹೊರಬಂದ ಸಾಹಿತ್ಯವೆ ಶರಣ ಸಾಹಿತ್ಯ. ಜನಸಾಮಾನ್ಯರ ಅಡುನುಡಿಗಳೆ ವಚನಗಳು. ವಚನಗಳು ಅನುಭವದ ಅರಳುಗಳು, ಕನ್ನಡ ಸಾಹಿತ್ಯಕ್ಕೆ ಶರಣರು ತಮ್ಮ ವಚನಗಳ ಮೂಲಕ ಹೊಸ ಆಯಾಮವನ್ನು ನೀಡಿದ್ದಾರೆ ಎಂದು
ಅವರು ತಿಳಿಸಿದ್ದಾರೆ.
ಶಿವನಿ ಪಪೂ ಕಾಲೇಜು ಪ್ರಾಚಾರ್ಯ ಸಿ. ಜಯ್ಯಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜ್ಞಾನಬಂಡಾರ ಹೆಚ್ಚಿಸುವಲ್ಲಿ ಇಂತಹ ಕಾರ್ಯಕ್ರಮಗಳು ಪೂರಕವಾಗಿದ್ದು ಪರಿಷತ್ತು ಇದನ್ನು ಎಲ್ಲ ಗ್ರಾಮಗಳಿಗೆ ತಂದಿರುವುದು ಪ್ರಶಂಶನೀಯ ಎಂದರು. ತಾಲೂಕು ಕಸಾಪ ಅಧ್ಯಕ್ಷ ಜಿ. ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತ ಉಪನ್ಯಾಸಕ ಆನಂದಮೂರ್ತಿ, ಕಸಾಪ ಹೋಬಳಿ ಕಾರ್ಯದರ್ಶಿ ಸೋಮಶೇಖರ್, ಮಹಿಳಾ ಘಟಕದ ಅಧ್ಯಕ್ಷೆ ಶಾರದಮ್ಮ ಇದ್ದರು.