ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು
ಕಡೂರು: ಭ್ರಷ್ಟತೆಯ ಪರಮಾವಧಿ ಮುಟ್ಟಿರುವ ಬಿಜೆಪಿ ಸರ್ಕಾರವು ಬಹುಮತ ಕಳೆದುಕೊಂಡು ರಾಜ್ಯದಲ್ಲಿ ಉಂಟಾಗಿರುವ ಸಾಂವಿಧಾನಿಕ ಬಿಕ್ಕಟ್ಟನ್ನು ಗಣನೆಗೆ ತೆಗೆದುಕೊಂಡು ಸರ್ಕಾರವನ್ನು ವಜಾಗೊಳಿಸಲು ಬಗ್ಗೆ ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶ ಮಾಡಿ ಸೂಕ್ತ ನಿಲುವು ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿ.ಪರಮೇಶ್ವರ್ ಆಗ್ರಹಿಸಿದರು.
ಅವರು ಕಡೂರು ಪಟ್ಟಣದಲ್ಲಿ ಸಂಜೆ ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಹೆಚ್. ಚಂದ್ರಪ್ಪನವರ ನಿವಾಸದಲ್ಲಿ ಕಡೂರು ಬ್ಲಾಕ್ ಕಾಂಗ್ರೆಸ್ ಪರವಾಗಿ ನೀಡಿದ ಅಭಿನಂದನೆ ಸ್ವೀಕರಿಸಿದ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಿಎಂ ರಾಜಿನಾಮೆ ನೀಡಲಿ: ಬಿಜೆಪಿ ಸರ್ಕಾರದ 13 ಶಾಸಕರು ಹಾಗು ಇಬ್ಬರು ಸಚಿವರು ರಾಜಿನಾಮೆ ಸಲ್ಲಿಸಿರುವುದರಿಂದ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ತಲೆದೋರಿದೆ. ಈ ಸಮಯದಲ್ಲಿ ರಾಜ್ಯದಲ್ಲಿ ಅರಾಜಕತೆಯಂತಹ ವಾತಾವರಣ ಸೃಷ್ಟಿಯಾಗಿರುವುದರಿಂದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ವರಿಗೆ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ನಂಬಿಕೆ ಹಾಗು ಸಂವಿಧಾನದ ಬಗ್ಗೆ ಗೌರವ ಇದ್ದರೆ ಈ ಕೂಡಲೇ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದ ಅವರು, ಕೂಡಲೇ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಅಧಿವೇಶನ ಕರೆದು ಬಹುಮತ ಸಾಭೀತುಪಡಿಸಲು ಸೂಚನೆ ನೀಡಬೇಂಕೆಂದರು.
ಜವಬ್ದಾರಿ ಸ್ಥಾನದಲ್ಲಿರುವ ಸ್ಪೀಕರ್ ಬೋಪಯ್ಯನವರು ಎಲ್ಲಿದ್ದಾರೆಂದು ಸರ್ಕಾರದ ಗಮನಕ್ಕೆ ಬಂದಿಲ್ಲ ಎಂದರೆ ಜವಬ್ದಾರಿ ಸ್ಥಾನದಲ್ಲಿರುವ ನಾಯಕರು ನೀಡುವ ಮಾಹಿತಿಯೇ ಇಂದು. ಇದು ಬಹು ದೊಡ್ಡ ವಿಪರ್ಯಾಸವಾಗಿದ್ದು ಇದು ರಾಜ್ಯದ ಜನರನ್ನು ರಕ್ಷಿಸುವ ಗೃಹ ಇಲಾಖೆಯ ಬಹು ದೊಡ್ಡ ವೈಫಲ್ಯ ಎಂದರು.
ಸ್ಪೀಕರ್ ಎಲ್ಲಿ: ತಮಗೆ ಲಭಿಸಿರುವ ಮಾಹಿತಿ ಪ್ರಕಾರ ಸ್ಪೀಕರ್ ಅವರನ್ನು ಕ್ಯಾಬಿನೆಟ್ ಮಂತ್ರಿಯೊಬ್ಬರು ವಿಮಾನ ನಿಲ್ದಾಣಕ್ಕೆ ಬಿಟ್ಟು ಬಂದಿದ್ದಾರೆ. ಈ ಬಿಜೆಪಿ ಸರ್ಕಾರವನ್ನು ಸತತ ಎರಡು ಭಾರಿ ಬೋಪಯ್ಯನವರು ರಕ್ಷಣೆ ಮಾಡಿದ್ದು ಇದೀಗ ಈ ರೀತಿಯ ತಂತ್ರ ಅನುಸರಿಸುವ ಮೂಲಕ ರಾಜ್ಯ ಸರ್ಕಾರವನ್ನು ಮತ್ತೊಮ್ಮೆ ಇಕ್ಕಟ್ಟಿನಿಂದ ಪಾರು ಮಾಡುವ ಹುನ್ನಾರ ನಡೆಸಲಾಗುತ್ತಿದೆ. ಈ ಕುರಿತು ರಾಜ್ಯಪಾಲರು ತಮಗೆ ಇರುವ ಅಧಿಕಾರವನ್ನು ಬಳಸಿಕೊಂಡು ಸ್ಪೀಕರ್ ಅವರನ್ನು ತಕ್ಷಣವೇ ವಾಪಸ್ ಕರೆಸಿಕೊಂಡು ಸಂವಿಧಾನದ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿ ಸರ್ಕಾರವನ್ನು ವಜಾ ಮಾಡುವಂತೆ ಆಗ್ರಹಿಸಿದರು. ಸದಾಶಿವ ಆಯೋಗದ ವರದಿ ಕುರಿತು ಸುದ್ದಿಗಾರರ ಪಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಸದಾಶಿವ ವರದಿಯ ತಿರುಳು ತಮಗೆ ತಿಳಿದು ಬಂದಿಲ್ಲ. ಸದಾಶಿವ ಆಯೋಗದ ವರದಿಯ ಕುರಿತು ತಾವು ಈಗಲೇ ಎನನ್ನೂ ಸ್ಪಷ್ಟವಾಗಿ ಹೇಳುವುದಿಲ್ಲ ಎಂದರು.
ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಸರ್ಕಾರವು ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದು ರಾಜ್ಯಪಾಲರು ಕೂಡಲೇ ಇಂತಹ ಬಿಕ್ಕಟ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಬಿ.ಮಕ್ಲಾರ್ಜುನ್,ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಹೆಚ್. ಚಂದ್ರಪ್ಪ, ಮುಖಂಡರಾದ ಕೆ.ಎಂ.ಕೆಂಪರಾಜು,ಸಚಿನ್ ಮಿಗಾ, ಶೂದ್ರ ಶ್ರೀನಿವಾಸ್, ಎನ್.ಬಶೀರ್ ಸಾಬ್, ಪಕ್ಷದ ವಕ್ತಾರ ಬಾಸೂರು ಚಂದ್ರಮೌಳಿ, ತಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.