ಜನತೆಯ ಸಹಕಾರವಿಲ್ಲದೆ ಕಾರ್ಯಕ್ರಮ ಯಶಸ್ವಿ ಸಾಧ್ಯವಿಲ್ಲ
ಚಿಕ್ಕಮಗಳೂರು: ಜನತೆಯ ಸಹಕಾರವಿಲ್ಲದೆ ಸರ್ಕಾರದ ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಚಿಕ್ಕಮಗಳೂರು ತಾಪಂ ಕಚೇರಿ ಅಧೀಕ್ಷಕ ಸದಾಶಿವ ಹೇಳಿದ್ದಾರೆ.
ವಾರ್ಷಿಕ ಶಿಬಿರ: ತಾಲೂಕಿನ ಮೈಲಿಮನೆ ಸರ್ಕಾರಿ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಎಂಇಎಸ್ ಮಹಿಳಾ ಪದವಿ ಕಾಲೇಜಿನಿಂದ ನಡೆಯುತ್ತಿರುವ ಎನ್‌ಎಸ್‌ಎಸ್ ವಿಶೇಷ ವಾರ್ಷಿಕ ಶಿಬಿರದಲ್ಲಿ ವಾರ್ತಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಉತ್ತಮ ಆಡಳಿತ ಹಾಗೂ ಜನ ಸಹಭಾಗಿತ್ವ ಕುರಿತ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಲವಾರು ಜನಪರ ಯೋಜನೆಗಳ ನಿರ್ಣಯ ತೆಗೆದುಕೊಳ್ಳುವುದು ಜನರೇ ಆಯ್ಕೆ ಮಾಡಿರುವ ಜನ ಪ್ರತಿನಿಧಿಗಳಿಂದಲೇ ಎಂದು ಹೇಳಿದರು.
ಮೈಲಿಮನೆ ಗ್ರಾಪಂ ಅಧ್ಯಕ್ಷ ಜೆ.ಸಿ. ಕಿಷನ್ ಮಾತನಾಡಿ, ಗ್ರಾಪಂಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಜನತೆ ಆಸಕ್ತಿಯಿಂದ ಪಾಲ್ಗೊಳ್ಳಬೇಕು ಇದರಿಂದ ಗ್ರಾಪಂ ಆಗು ಹೋಗುಗಳು ಜನರಿಗೆ ತಿಳಿಯುತ್ತದೆ ಎಂದರು.
ಸ್ವಚ್ಛತೆ: ಎಂಇಎಸ್ ಕಾಲೇಜು ಎನ್‌ಎಸ್‌ಎಸ್ ವಿದ್ಯಾರ್ಥಿನಿಯರು ಗ್ರಾಮದಲ್ಲಿ ಶ್ರಮದಾನದ ಮೂಲಕ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ, ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಬಹಳ ಯಶಸ್ವಿಯಾಗಿ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತ ಪಡಿಸಿದರು. ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಮಾತನಾಡಿ, ವಿದ್ಯಾರ್ಥಿಗಳು ಉದ್ಯೋಗವನ್ನು ಗುರಿಯಾಗಿಸಿಕೊಂಡು ವಿದ್ಯಾಭ್ಯಾಸ ಮಾಡುತ್ತಿರುವ ಪ್ರವೃತ್ತಿ ಸರಿ ಅಲ್ಲ, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಮಾನವೀಯ ಗುಣಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಚಿಂತಿಸುವ ಜೊತೆಗೆ ಶಿಸ್ತನ್ನು ರೂಢಿಸಿಕೊಂಡು ಸಮಾಜದ ಅಭಿವೃದ್ಧಿಗೆ ಚಿಂತಿಸುವ ಶಿಕ್ಷಣ ಅಗತ್ಯ ಎಂದು ಹೇಳಿದರು.
ಸದುಪಯೋಗ: ವಾರ್ತಾ ಇಲಾಖೆಯ ಇ.ಎಸ್. ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ನೆಮ್ಮದಿ ಕೇಂದ್ರಗಳ ಮೂಲಕ ಗ್ರಾಮೀಣ ಜನರ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಸರ್ಕಾರದ ಯೋಜನೆಗಳನ್ನು ಜನರು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾಗವಹಿಸಿ ತಿಳಿದುಕೊಳ್ಳಬೇಕು ಗ್ರಾಮಗಳ ಏಳಿಗೆಯೇ ದೇಶದ ಅಭಿವೃದ್ಧಿಯ ನಾಂದಿಗೆ ಸಹಕಾರವಾಗಲು ಕಾರಣ ಎಂದರು.
ಪೂರ್ಣೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ಎಚ್. ವಿಷ್ಣುವರ್ಧನ್, ಎನ್‌ಎಸ್‌ಎಸ್ ಅಧಿಕಾರಿ ಎನ್. ಪ್ರಶಾಂತ್, ಎಂ.ಎನ್. ಸಿದ್ದೇಗೌಡ, ಬಸವರಾಜ್, ವಾಸವಿ ರವಿಕುಮಾರ್ ಮಾತನಾಡಿದರು. ಶಿಬಿರಾರ್ಥಿಗಳಾದ ಸೌಮ್ಯ ಸ್ವಾಗತಿಸಿ, ಸುಮತಿ ವಂದಿಸಿದರು. ಪಾವನಿ ಕಾರ್ಯಕ್ರಮ ನಿರೂಪಿಸಿದರು.