ನವೋದಯ ಶಾಲೆ ಸಿಬ್ಬಂದಿ ಧರಣಿ
ಚನ್ನಗಿರಿ: ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿರುವ ಜಿಲ್ಲಾ ಜವಾಹರ ನವೋದಯ ವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಗುರುವಾರ ವಿದ್ಯಾಲಯದ ಎದುರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಒಂದು ದಿನದ ಧರಣಿ ಸತ್ಯಾಗ್ರಹವನ್ನು ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ನವೋದಯ ವಿದ್ಯಾಲಯ ಸಿಬ್ಬಂದಿ ಸಂಘದ ಕಾರ್ಯದರ್ಶಿ ಎಂ.ಯೋಗೀಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ದುಡಿಯುತ್ತಿರುವ ವಿದ್ಯಾಲಯದ ಸಿಬ್ಬಂದಿ ವರ್ಗಕ್ಕೆ ಪಿಂಚಣಿ ಸೌಲಭ್ಯ ವಿಸ್ತರಿಸಬೇಕು ಎಂದರು.
ಬೇಡಿಕೆಗಳು: ಶೇ.10ರ ವಿಶೇಷ ಭತ್ಯೆಯನ್ನು ಬೋಧಕೇತರ ಸಿಬ್ಬಂದಿಗೆ ನೀಡಬೇಕು, ಎಂಎಸಿಪಿ ಸೌಲಭ್ಯಗಳನ್ನು ಮತ್ತು 6ನೇ ವೇತನ ಆಯೋಗದಲ್ಲಿ ಮಾಡಿರುವ ಶಿಫಾರಸ್ಸಿನಂತೆ ಇನ್ನೂ ಅನೇಕ ಸೌಲಭ್ಯಗಳನ್ನು ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ತಹಸೀಲ್ದಾರ್‌ಗೆ ಮನವಿ: ಮುಷ್ಕರ ನಿರತ ಎಲ್ಲಾ ಸಿಬ್ಬಂದಿಗಳು ಸಾಂದರ್ಭಿಕ ರಜೆಯನ್ನು ಸಲ್ಲಿಸಿ ಮುಷ್ಕರದಲ್ಲಿ ಭಾಗವಹಿಸಿದ್ದರು. ಮುಷ್ಕರ ನಿರತರ ಬಳಿ ತಹಸಿಲ್ದಾರ್ ಎಚ್.ಎಂ.ರೇವಣಸಿದ್ದಪ್ಪ ತೆರಳಿ ಮನವಿ ಪತ್ರ ಸ್ವೀಕರಿಸಿದರು.
ಈ ಶಿಕ್ಷಕರ ಮುಷ್ಕರಕ್ಕೆ ಬೆಂಬಲವಾಗಿ ಕರ್ನಾಟಕ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಉಪಾಧ್ಯಕ್ಷ ಟಿ.ಎಸ್.ಪರಮೇಶ್ವರಪ್ಪ, ಪ್ರೌಢ ಶಾಲಾ ಸಹಾ ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ಎಂ.ಯು.ಚನ್ನಬಸಪ್ಪ, ಅಧ್ಯಕ್ಷ ಸಿದ್ದೇಶಪ್ಪ, ಕಾರ್ಯದರ್ಶಿ ಪಿ.ವಿ.ಸ್ವಾಮಿ, ಇವರು ಮುಷ್ಕರದಲ್ಲಿ ಭಾಗವಹಿಸಿದ್ದರು.
ಸಿಬ್ಬಂದಿಗಳಾದ ರವಿ, ರೇಖಾ, ಕಲಾವತಿ, ದೊಡ್ಡಮನಿ, ಚಿಟ್ಟ, ಯಲ್ಲಪ್ಪ ಭಾಗವಹಿಸಿದ್ದರು. ವಿದ್ಯಾರ್ಥಿಗಳ ಬೋಧನೆಗಾಗಲಿ, ಮೆಸ್‌ಗಾಗಲಿ ತೊಂದರೆಯಾಗದಂತೆ ಗೌರವ ಶಿಕ್ಷಕರನ್ನು ಮತ್ತು ಅಡುಗೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು.