ನ್ಯಾ. ಸದಾಶಿವ ವರದಿಗೆ ವಿರೋಧ
ದಾವಣಗೆರೆ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಕೈಬಿಡಲು ಒತ್ತಾಯಿಸಿ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಭೋವಿ ಸಮಾಜ ಬಾಂಧವರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಭೋವಿ ಗುರುಪೀಠದ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ನ್ಯಾ. ಸದಾಶಿವ ಆಯೋಗದ ವರದಿ ಕೈಬಿಡುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.
ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯು ಪರಿಶಿಷ್ಟ ಜಾತಿಗಳ ಮಧ್ಯೆ ಕಂದಕ ಸೃಷ್ಟಿಸುವಂತಿದೆ. ರಾಜಕೀಯ ನಾಯಕರು, ಅಧಿಕಾರಿಗಳು ತಮ್ಮ ಅಧಿಕಾರ ಬಳಸಿ, ಏಕಪಕ್ಷೀಯವಾಗಿ ಸರ್ಕಾರಕ್ಕೆ ವರದಿ ಮಂಡನೆಯಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ದುರುದ್ದೇಶದಿಂದ ಕೂಡಿದೆ: ಯಾವುದೇ ವರದಿಯಾಗಲೀ ಪ್ರತ್ಯಕ್ಷ ಮತ್ತು ಪಾರದರ್ಶಕವಾಗಿರಬೇಕು. ಆದರೆ, ನ್ಯಾ. ಸದಾಶಿವ ಆಯೋಗವು ಗುಪ್ತವಾಗಿ ವರದಿ ಮಂಡಿಸಿದೆ. ಹೀಗೆ ರಹಸ್ಯವಾಗಿ ಸರ್ಕಾರಕ್ಕೆ ಸಲ್ಲಿಸಿರುವ ವರದಿ ದುರುದ್ದೇಶದಿಂದ ಕೂಡಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಆಯೋಗದ ವರದಿಯನ್ನು ಪುನರ್ ಪರಿಶೀಲಿಸುವಂತೆ ಸರ್ಕಾರಕ್ಕೆ ಅವರು ಆಗ್ರಹಿಸಿದರು.
ವಿಷ ಬೀಜ ಬಿತ್ತುವ ಕೆಲಸ: ಅನಾದಿಯಿಂದ ಶೋಷಣೆಗೆ ಒಳಗಾಗುತ್ತಾ ಬಂದ ಸಮುದಾಯಗಳು ಸಂಘಟಿತವಾಗಬಾರದೆಂಬ ದುರುದ್ದೇಶವನ್ನು ಆಯೋಗವು ಹೊಂದಿದಂತಿದೆ. ಪರಿಶಿಷ್ಟ ಜಾತಿಗಳಲ್ಲೇ ಪರಸ್ಪರ ಭಿನ್ನಾಭಿಪ್ರಾಯ ಮೂಡಿಸುವ ಮೂಲಕ ಮತ್ತಷ್ಟು ವಿಷ ಬೀಜ ಬಿತ್ತುವ ಕೆಲಸ ಮಾಡಲಾಗಿದೆ. ಪರಿಶಿಷ್ಟ ಜಾತಿಗೊಳಪಡುವ ಎಲ್ಲಾ ಸಮುದಾಯಗಳೂ ವರದಿ ಹಿಂದಿನ ನೈಜತೆ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಲಿ ಎಂದು ಅವರು ತಿಳಿಸಿದರು.
ಎಚ್ಚರಿಕೆ: ವರದಿ ಏಕಪಕ್ಷೀಯವಾಗಿದ್ದು, ಇದನ್ನು ಭೋವಿ ಸಮಾಜ ಒಪ್ಪದು. ಸರ್ಕಾರ ತಕ್ಷಣ ವರದಿ ಪುನರ್ ಪರಿಶೀಲಿಸಿ, ತುಳಿತಕ್ಕೆ ಒಳಗಾದ ಸಮುದಾಯಕ್ಕೆ ನ್ಯಾಯವನ್ನು ದೊರಕಿಸಿಕೊಡಬೇಕು. ನ್ಯಾ. ಸದಾಶಿವ ಆಯೋಗದ ವರದಿಯೇ ಅಂತಿಮ ಎನ್ನುವ ಮೊಂಡುತನಕ್ಕಿಳಿದರೆ, ಭಿನ್ನಾಭಿಪ್ರಾಯಗಳು ತಲೆದೋರಿ, ಪರಿಸ್ಥಿತಿಯು ಬಿಗಡಾಯಿಸುತ್ತದೆ ಎಂಬ ಅಂಶವನ್ನು ಸರ್ಕಾರದ ಗಮನಕ್ಕೆ ತರಲು ಬಯಸುತ್ತೇವೆ ಎಂದು ಅವರು ಸೂಚ್ಯವಾಗಿ ಎಚ್ಚರಿಸಿದರು.
ಕೆಪಿಸಿಸಿ ಸದಸ್ಯ ಡಿ. ಬಸವರಾಜ ಮಾತನಾಡಿ, ಪರಿಶಿಷ್ಟ ಸಮುದಾಯಗಳು ಅನಾದಿಯಿಂದ ಶೋಷಣೆ, ದೌರ್ಜನ್ಯಕ್ಕೆ ಒಳಗಾಗುತ್ತಾ ಬಂದಿವೆ. ನೂರಾರು ವರ್ಷಗಳಿಂದ ಒಂದಾಗಿದ್ದಂತಹ ಸಮುದಾಯ ನ್ಯಾ. ಸದಾಶಿವ ಆಯೋಗದ ವರದಿಯಿಂದಾಗಿ ಪರಸ್ಪರರಲ್ಲಿದ್ದ ನಂಬಿಕೆ, ವಿಶ್ವಾಸವನ್ನೇ ಕಳೆದುಕೊಂಡು, ಒಡಕುಂಟು ಮಾಡಿದಂತಾಗಿದೆ ಎಂದರು.
ಡಾ. ವೈ. ರಾಮಪ್ಪ ಮಾತನಾಡಿ, ಸರ್ಕಾರ ಯಾವುದೇ ಒಂದು ವರದಿ ಅಂಗೀಕರಿಸುವ ಮುನ್ನ ಅದರ ಸತ್ಯಾಸತ್ಯತೆ, ಅದರಿಂದಾಗುವ ಪರಿಣಾಮಗಳು, ವಾಸ್ತವ ಸ್ಥಿತಿಗತಿಯನ್ನು ಅರಿಯಬೇಕಾಗುತ್ತದೆ ಎಂದು ಹೇಳಿದರು.
ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಅರಸೀಕೆರೆ ತಿಪ್ಪಣ್ಣ, ಜಿಪಂ ಸದಸ್ಯ ಭಾನುವಳ್ಳಿ ಸಿ.ಎನ್. ವೀರಭದ್ರಪ್ಪ, ಜಿಲ್ಲಾಧ್ಯಕ್ಷ ಎಚ್. ಹೇಮರಾಜ, ಪ್ರಧಾನ ಕಾರ್ಯದರ್ಶಿ, ವಕೀಲ ವಿ. ಗೋಪಾಲ, ಹಿರಿಯ ಉಪಾಧ್ಯಕ್ಷ ಎಚ್. ಜಯಣ್ಣ, ವಿ. ಶ್ರೀನಿವಾಸ, ಮಂಜಣ್ಣ, ನೀರ್ಥಡಿ ಎನ್.ಡಿ. ಗುರುಮೂರ್ತಿ, ಚನ್ನಗಿರಿ ಚೌಡಪ್ಪ, ವಕ್ತಾರ ಎಸ್. ರವಿಕುಮಾರ, ಕೇಶವಮೂರ್ತಿ, ರೇವಣಸಿದ್ದಪ್ಪ ಮತ್ತಿತರರು ಇದ್ದರು. ನಂತರ ಉಪ ವಿಭಾಗಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.