ಅಮೆರಿಕಾ ಯುವಕನ ಕೈ ಹಿಡಿದ ಮಲೆನಾಡ ಯುವತಿ
ಚಿಕ್ಕಮಗಳೂರು: ಮಲೆನಾಡಿನ ಯುವತಿಯನ್ನು ಯುಎಸ್ಎನ ಯುವಕ ಭಾರತೀಯ ಹಿಂದೂ ಸಂಪ್ರದಾಯದ ಪ್ರಕಾರ ಶುಕ್ರವಾರ ವಧುವಿನ ಮನೆಯಂಗಳದಲ್ಲಿ ಮದುವೆಯಾದನು.
ನಗರದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಕಬ್ಬಿನಹಳ್ಳಿಯ ಬಾಳೆಕೊಳ ಎಸ್ಟೇಟ್ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭಾರತಿ ಮತ್ತು ಜಯಪ್ರಸಾದ್ ಅವರ ಪುತ್ರಿ ನಂದಿನಿ ಜಯಪ್ರಸಾದ್ ಅವರು, ಯುಎಸ್ಎ ಮೂಲದ ಡೇವಿಡ್ ಬೀಲ್ ಅವರ ಬಾಳ ಸಂಗತಿಯಾದರು.
ಹಿಂದೂ ಸಂಪ್ರದಾಯ: ಸುತ್ತಲೂ ಕಾಫಿ ತೋಟಗಳು, ಅದರ ನಡುವೆ ಇರುವ ಜಯಪ್ರಸಾದ್ ಅವರ ಮನೆಯ ಅಂಗಳದಲ್ಲಿ ಕಾರುಗಳು ಸಾಲುಗಟ್ಟಿ ನಿಂತಿದ್ದವು. ಮಧ್ಯಾಹ್ನ ಸುಮಾರು 12.30ರ ವೇಳೆಗೆ ಡೇವಿಡ್ ಬೀಲ್ ಅವರು ತಮ್ಮ ಸಂಬಂಧಿಕರೊಂದಿಗೆ ಕಾರಿನಲ್ಲಿ ಬಂದು ಇಳಿಯುತ್ತಿದ್ದಂತೆ ಮಹಿಳೆಯರು ಹಿಂದೂ ಸಂಪ್ರದಾಯದ ಪ್ರಕಾರ ಡೇವಿಡ್ ಅವರ ಹಣೆಗೆ ತಿಲಕ ಇಟ್ಟು, ಅರತಿ ಎತ್ತಿ, ಮದುವೆ ಮಂಟಪಕ್ಕೆ ಕರೆದುಕೊಂಡು ಹೋದರು. ಇಲ್ಲಿ ನಿರ್ಮಿಸಿದ್ದ ಮಂಟಪದಲ್ಲೂ ವಿಶೇಷತೆ ಇತ್ತು. ಕಾಫಿಯ ಗಿಡಗಳು ಹಾಗೂ ಹೂವಿನೊಂದಿಗೆ ಅಲಂಕಾರ ಮಾಡಲಾಗಿತ್ತು.
ಡೇವಿಡ್ ಅವರ ಸಂಬಂಧಿಕ ಮಹಿಳೆಯರು ಮದುವೆ ಸಮಾರಂಭದಲ್ಲಿ ಭಾರತೀಯ ಮಹಿಳೆಯರು ಸೀರೆ ಉಟ್ಟು, ಹಣೆಗೆ ಕುಂಕುಮ ಇಟ್ಟುಕೊಂಡಿದ್ದರು. ವಧುವಿನೊಂದಿಗೆ ಮದುವೆ ಮಂಟಪಕ್ಕೆ ಬಂದ ನಂತರ, ನಂದಿನಿಯನ್ನು ಕರೆದುಕೊಂಡು ಬರಲಾಯಿತು.
ಪುರೋಹಿತರು ಡೇವಿಡ್ ಅವರಿಂದ ಕೆಲವು ಮಂತ್ರಗಳನ್ನು ಹೇಳಿಸಿದರು. ಮಾಂಗಲ್ಯಧಾರಣೆಕ್ಕೂ ಮೊದಲು ಮದುವೆಯಲ್ಲಿ ಪಾಲ್ಗೊಳ್ಳುವವರು ಮಾಂಗಲ್ಯ ಮುಟ್ಟಿ ಆಶೀರ್ವಾದ ಮಾಡುವ ರೀತಿಯಲ್ಲಿಯೇ ವಿದೇಶಿಯರು ಅದೇ ರೀತಿ ಮಾಂಗಲ್ಯ ಮುಟ್ಟಿದರು. ಎಲ್ಲರಂತೆ ಅಕ್ಷತೆ ಹಾಕಿದರು. ಬಳಿಕ ನೂತನ ವಧು- ವರರು ಸಪ್ತಪದಿ ತುಳಿದರು. ಪುರೋಹಿತರಾದ ಗೋವಿಂದರಾಜ್ ಅವರು ಏಳು ಹೆಜ್ಜೆಯ ಅರ್ಥವನ್ನು ವರನಿಗೆ ವಿವರಿಸಿದರು.
ನಂದಿನಿ ಅವರು ಜರ್ಮನಿ ಹಾಗೂ ಪ್ಲಾರಿಡಾದಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಬೆಂಗಳೂರಿನ ಇನ್ಪೋಸಿಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಡೇವಿಡ್ ಬೀಲ್ ಅವರು ನಂದಿನಿ ಅವರಿಗೆ ಪರಿಚಯವಾಗಿದ್ದು, ಇವರ ನಡುವಿನ ಸ್ನೇಹ ಸಂಬಂಧ ಬೆಳೆದು, ಶುಕ್ರವಾರದಂದು ಹಿರಿಯರ, ಬಂಧುಗಳ ಸಮ್ಮುಖದಲ್ಲಿ ಮದುವೆಯಾದರು.