ಬಾಗಲಕೋಟೆ, ಬಿಜಾಪುರ ಮೇಲುಗೈ
ಚಿಕ್ಕಮಗಳೂರು: ಗಣರಾಜ್ಯೋತ್ಸವ ಪ್ರಯುಕ್ತ ಜಿಲ್ಲಾಡಳಿತ ಶುಕ್ರವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಸೈಕಲ್ ಸ್ಪರ್ಧೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಪ್ರಥಮ ಬಹುಮಾನಗಳು ಬಾಗಲಕೋಟೆ ಹಾಗೂ ಬಿಜಾಪುರ ಜಿಲ್ಲೆಗಳ ಪಾಲಾಗಿವೆ.
ಗೇರ್ ಸಹಿತ ಸೈಕಲ್‌ನ ಪುರುಷರ ವಿಭಾಗದಲ್ಲಿ ಬಾಗಲಕೋಟೆಯ ಬಸು ಕಡಪಟ್ಟಿ ಪ್ರಥಮ ಸ್ಥಾನ ಪಡೆದಿದ್ದರೆ, ಮಹಿಳೆಯರ ವಿಭಾಗದಲ್ಲಿ ಬಿಜಾಪುರದ ರೇಣುಕಾ ಪ್ರಹ್ಲಾದ್ ದಾಂಡಿನ್, ಗೇರ್ ರಹಿತ ಸೈಕಲ್‌ನ ಪುರುಷರ ವಿಭಾಗದಲ್ಲಿ ಬಿಜಾಪುರದ ಯಲಗುರೇಶ್ ಈರಪ್ಪ ಗಡ್ಡಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಿಂದ ಹೊರಟ ಗೇರ್ ಸಹಿತ ಸೈಕಲ್‌ನ ಪುರುಷರ ವಿಭಾಗದಲ್ಲಿ ಬಸು ಕಡಪಟ್ಟಿ ಅವರು 1 ಗಂಟೆ 16 ನಿಮಿಷ 23 ಸೆಕೆಂಡ್‌ಗಳಲ್ಲಿ ಚಿಕ್ಕಮಗಳೂರಿಗೆ ತಲುಪುವ ಮೂಲಕ ಪ್ರಥಮ ಬಹುಮಾನ ಪಡೆದುಕೊಂಡರು.
ಸಂಗಮೇಶ್ ದ್ವಿತೀಯ: ಬೆಂಗಳೂರಿನ ಸಂಗಮೇಶ ತಳವಾರ - ದ್ವಿತೀಯ, ಲಕ್ಷ್ಮಣ ಖುರಾಣಿ - ತೃತೀಯ, ಬೆಳಗಾವಿಯ ಭೀಮಪ್ಪ ಬಸಪ್ಪ ನಾಲ್ಕನೇ ಸ್ಥಾನ, ಬೆಂಗಳೂರಿನ ನವೀನ್ ರಾಜ್ ಐದನೇ ಸ್ಥಾನ ಪಡೆದುಕೊಂಡರು.
ಗೇರ್ ಸಹಿತ ಸೈಕಲ್‌ನ ಮಹಿಳೆಯರ ವಿಭಾಗದಲ್ಲಿ ಮೂಡಿಗೆರೆಯಿಂದ ಚಿಕ್ಕಮಗಳೂರಿನ ದೂರವನ್ನು ಬಿಜಾಪುರದ ರೇಣುಕಾ ಪ್ರಹ್ಲಾದ್ ದಾಂಡಿನ್ ಅವರು ಕಡಿಮೆ ಕ್ರಮಿಸಿ ಪ್ರಥಮ ಸ್ಥಾನ ಪಡೆದುಕೊಂಡರು.
ಸೀಮಾ ಪರಸಪ್ಪ ಅಡಗಲ್ - ದ್ವಿತೀಯ, ಸಾಹಿರಾ ಬಾನು ಹಾಜಿ ಮಸ್ತಾನ್ ಲೋಧಿ - ತೃತೀಯ, ಬಾಗಲಕೋಟೆಯ ಶೈಲಾ ಸಂಗಪ್ಪ ಮಟ್ಟಲ್ - ನಾಲ್ಕನೇ ಸ್ಥಾನ, ದಾನಮ್ಮ ಕಮಲಮ್ಮ- ಐದನೇ ಸ್ಥಾನ ಪಡೆದರು.
ಈರಪ್ಪ ಗಡ್ಡಿ ಪ್ರಥಮ: ಗೇರ್ ರಹಿತ ಸೈಕಲ್‌ನ ಪುರುಷರ ವಿಭಾಗದಲ್ಲಿ (ಹಾಂದಿ- ಚಿಕ್ಕಮಗಳೂರು) ಬಿಜಾಪುರದ ಯಲಗುರೇಶ್ ಈರಪ್ಪ ಗಡ್ಡಿ (37 ನಿಮಿಷ 41 ಸಕೆಂಡ್)- ಪ್ರಥಮ, ಬಾಗಲಕೋಟೆಯ ರಂಗನಾಥ್ ಬಸನಾಳ್ - ದ್ವಿತೀಯ, ಕೆ.ಆರ್. ನಗರದ ಎಲ್ಲಪ್ಪ ಮಾಲಪ್ಪ ಬಿದರಿ - ತೃತೀಯ, ಬಾಗಲಕೋಟೆಯ ರಾಘು - ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಕೊಟ್ಟಿಗೆಹಾರದಿಂದ ಹೊರಟ ಗೇರ್ ಸಹಿತ ಪುರುಷರ ಸೈಕಲ್ ಸ್ಪರ್ಧೆಗೆ ಜಿಲ್ಲಾಧಿಕಾರಿ ಎಸ್.ಟಿ. ಅಂಜನ್ ಕುಮಾರ್ ಚಾಲನೆ ನೀಡಿದರು.
ಮೂಡಿಗೆರೆಯಿಂದ ಹೊರಟ ಗೇರ್ ಸಹಿತ ಮಹಿಳೆಯರ ಸೈಕಲ್ ಸ್ಪರ್ಧೆಗೆ ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಚಾಲನೆ ನೀಡಿದರು. ಹಾಂದಿಯಿಂದ ಹೊರಟ ಗೇರ್ ರಹಿತ ಪುರುಷರ ಸೈಕಲ್ ಸ್ಪರ್ಧೆಯನ್ನು ಜಿಪಂ ಉಪಾಧ್ಯಕ್ಷೆ ಮಾಲಿನಿಬಾಯಿ ಉದ್ಘಾಟಿಸಿದರು.