ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ
ಶೃಂಗೇರಿ: ರಾಜ್ಯದಲ್ಲಿ ಜಾತ್ಯತೀತ ಜನತಾ ದಳ ಅಧಿಕಾರದ ಗದ್ದುಗೆ ಹಿಡಿದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ವ್ಯಕ್ತಪಡಿಸಿದರು.
ಶನಿವಾರ ಶೃಂಗೇರಿಯ ಕೂತಗೋಡು ಪಂಚಾಯಿತಿ ಗಾಳಿತೋಟದಲ್ಲಿ ಆಯೋಜಿಸಿದ್ದ ರೈತರು ಹಾಗೂ ಕೂಲಿ ಕಾರ್ಮಿಕರೊಂದಿಗೆ ಸಮಾಲೋಚನಾ ಸಭೆ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಅಬಿವೃದ್ಧಿ: ತಾನು ರಾಜಕೀಯದಲ್ಲಿ ರಾಜಕಾರಣದ ಹಿನ್ನೆಲೆಯಿಂದ, ರಾಜಕಾರಣ ಮಾಡಲು ಬಂದವನಲ್ಲ. ಆಕಸ್ಮಿಕವಾಗಿ ಬಂದೆ. ಹಾಗೆಯೆ ಒದಗಿಬಂದ ಅವಕಾಶದಲ್ಲಿ ಮುಖ್ಯಮಂತ್ರಿಯಾದೆ. ತನಗೆ ಸಿಕ್ಕಿದ 20 ತಿಂಗಳ ಅವಧಿಯಲ್ಲಿ ರಾಜ್ಯದ ಅಬಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಜನತೆ ಜೆಡಿಎಸ್ ಬೆಂಬಲಿಸಿದರೆ ಜೆಡಿಎಸ್ ಅಧಿಕಾರಕ್ಕೆ ಬಂದ ಇಪ್ಪತ್ತನಾಲ್ಕು ಗಂಟೆಯೊಳಗೆ ರೈತರ ಸಂಪೂರ್ಣ ಸಾಲ ಮನ್ನಾ, ರಾಜ್ಯ ಸರ್ಕಾರದಿಂದಲೇ ರೈತರಿಗೆ ಗೊಬ್ಬರದ ಮೇಲಿನ ಸಬ್ಸಿಡಿ ಹಣ, ಬಗರ್ ಹುಕುಂ, ಒತ್ತುವರಿದಾರರ ಸಮಸ್ಯೆ ಪರಿಹಾರ, ಸುವರ್ಣ ಗ್ರಾಮ ಯೋಜನೆ ಕಲ್ಪನೆ, ಕೃಷಿ ಕಾರ್ಮಿಕರಿಗೆ ಆಶ್ರಯ ಮನೆ, ನಿರುದ್ಯೋಗಿ ಯುವಕರಿಗೆ ಉದ್ಯೋಗ ಯೋಜನೆ, ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಳೆ ನಿಗದಿ ಇತ್ಯಾದಿ ಯೋಜನೆಗಳನ್ನು ಜಾರಿಗೊಳಿಸುತ್ತೇನೆ ಎಂದರು.
ಬದುಕು ಸಂಕಷ್ಟ: ಕೇಂದ್ರ ಸರ್ಕಾರ ಸತತ ಬೆಲೆ ಏರಿಕೆ ಮಾಡುತ್ತಿದ್ದರೆ, ರಾಜ್ಯದಲ್ಲಿ ಆಡಳಿತ ರೂಡ ಬಿಜೆಪಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಬೊಕ್ಕಸವನ್ನೇ ಕೊಳ್ಳೆ ಹೊಡೆಯುತ್ತಿದೆ. ಹಳದಿ ಎಲೆ ರೋಗ, ಸತತ ಬೆಲೆ ಏರಿಕೆ, ವಿಪರೀತ ಸಾಲದಿಂದ ರೈತರ ಬದುಕು ಸಂಕಷ್ಟದಲ್ಲಿದ್ದು, ರಾಜ್ಯದಲ್ಲಿ ರೈತ ಆತ್ಮಹತ್ಯೆಯ ಹಾದಿ ಹಿಡಿದಿದ್ದಾನೆ. ಆದರೂ ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕೇಂದ್ರ ಸರ್ಕಾರವೂ ದೂರ ಉಳಿದಿದೆ. ತಾನೂ ಕೇಂದ್ರ ಸರ್ಕಾರದ ಮುಂದೆ ಆರ್ಥಿಕ ನೆರವಿಗೆ ಎಂದೂ ಕೈಚಾಚಿ ಬಿಕ್ಷೆ ಬೇಡಿಲ್ಲ ಎಂದು ಹೇಳಿದರು.
ವೈಜ್ಞಾನಿಕ ಬೆಲೆ: ಶೀಘ್ರದಲ್ಲಿ ರಾಜ್ಯದಲ್ಲಿ ಚುನಾವಣೆ ಬರಲಿದ್ದು ಯುಗಾದಿಯೊಳಗೆ ಚುನಾವಣಾ ಪ್ರಕಿಯೆಗಳು ಮುಗಿಯಲಿದೆ. ರೈತರು ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗಬಾರದು. ಜೆಡಿಎಸ್ ಮೇಲೆ ವಿಶ್ವಾಸ ಹೊಂದಬೇಕು. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಯೋಜನೆ ಜಾರಿಗೊಳಿಸಿ ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ಅನಿವಾರ್ಯವಾಗಿದೆ. ಬಿಜೆಪಿ ಮಂಡಿಸಿದ ಕೃಷಿ ಬಜೆಟ್ ಕೇವಲ ಪುಸ್ತಕದಲ್ಲಿಯೇ ಪ್ರಿಂಟಾಗಿ ಉಳಿದಿದೆ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ಕೇಂದ್ರ ಸರ್ಕಾರ ಕಳೆದ ಚಿಕ್ಕಮಗಳೂರು ಉಡುಪಿ ಲೋಕಸಭಾ ಉಪಚುನಾವಣೆಯಲ್ಲಿ ಸಾಲಮನ್ನಾ, ಗೋರಖ್ ಸಿಂಗ್ ವರದಿ ಅನುಷ್ಠಾನ ಗೊಳಿಸುವ ಕುರಿತು ಭರವಸೆ ನೀಡಿ ರೈತರನ್ನು ದಿಕ್ಕು ತಪ್ಪಿಸಿದರು ಎಂದು ಆರೋಪಿಸಿದರು.
ಬೆಳಗಾವಿಯಲ್ಲಿ ನಿರ್ಮಾಣಗೊಂಡ ವಿಧಾನ ಸೌಧಕ್ಕೆ ನನ್ನ ಪ್ರಯತ್ನಯೂ ಇದೆ. ಆದರೆ ರಾಜಕೀಯ ಉದ್ದೇಶದಿಂದ ನನ್ನ ಹೆಸರು ಕಲ್ಲಿನಲ್ಲಿ ಕೆತ್ತದಂತೆ ಮಾಡಲಾಯಿತು. ನನಗೆ ಕಲ್ಲಿನಲ್ಲಿ ಹೆಸರು ಮುಖ್ಯವಲ್ಲ. 6 ಕೋಟಿ ಕನ್ನಡಿಗರ ಹೃದಯದಲ್ಲಿರುವುದು ಶಾಶ್ವತ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಜಿ.ಜಿ. ಮಂಜುನಾಥ್, ಮಧುಸೂದನ್, ಹೂವಪ್ಪಗೌಡ, ಕಂಠಿ, ಮಂಜಪ್ಪ, ಕೆ.ಎಸ್. ರಮೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿವೇಕಾನಂದ ಕಾರ್ಯಕ್ರಮ ನಿರೂಪಿಸಿದರು.