ಗ್ರಾಮ ಲೆಕ್ಕಿಗರ ನೇಮಕಾತಿ 2ನೇ ಪಟ್ಟಿ ಪ್ರಕಟ
ಚಿಕ್ಕಮಗಳೂರು: ಜಿಲ್ಲಾ ಘಟಕದಲ್ಲಿ ಖಾಲಿ ಇದ್ದ 53 ಗ್ರಾಮಲೆಕ್ಕಿಗರ ಹುದ್ದೆಯನ್ನು ನೇರ ನೇಮಕಾತಿಯಿಂದ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳ ವರ್ಗವಾರು ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು.
ಆಯ್ಕೆಯಾದ 53 ಅಭ್ಯರ್ಥಿಗಳ ಸ್ಥಳ ನಿಯುಕ್ತಿಗಾಗಿ ನವೆಂಬರ್ 8 ರಂದು ಕೌನ್ಸೆಲಿಂಗ್ ನಡೆಸಲಾಗಿದ್ದು, ಕೌನ್ಸೆಲಿಂಗ್ನ 53 ಅಭ್ಯರ್ಥಿಗಳ ಪೈಕಿ 30 ಅಭ್ಯರ್ಥಿಗಳು ಮಾತ್ರ ಹಾಜರಾಗಿರುತ್ತಾರೆ. ಈ 30 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಹೊರಡಿಸಲಾಗಿದೆ.
30 ಅಭ್ಯರ್ಥಿಗಳ ಪೈಕಿ 5 ಅಭ್ಯರ್ಥಿಗಳು ಕರ್ತವ್ಯದ ಮೇಲೆ ಹಾಜರಾಗಿರುವುದಿಲ್ಲ. ಕರ್ತವ್ಯಕ್ಕೆ ಹಾಜರಾಗದ 5 ಅಭ್ಯರ್ಥಿಗಳ ನೇಮಕಾತಿಯನ್ನು ರದ್ದುಪಡಿಸಲಾಗಿದೆ. ಕರ್ತವ್ಯಕ್ಕೆ ಹಾಜರಾಗದ 5 ಅಭ್ಯರ್ಥಿಗಳ ಬದಲಾಗಿ ಹಾಗೂ ಕೌನ್ಸೆಲಿಂಗ್ಗೆ ಹಾಜರಾಗದ 23 ಅಭ್ಯರ್ಥಿಗಳು ಸೇರಿದಂತೆ ಒಟ್ಟು 28 ಅಭ್ಯರ್ಥಿಗಳನ್ನು ಮೆರಿಟ್ ಹಾಗೂ ಅರ್ಹತೆ ಆಧಾರದ ಮೇಲೆ ಆಯ್ಕೆ ಮಾಡಿ ಪ್ರಕಟಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಜಿಲ್ಲಾಧಿಕಾರಿ ಕಚೇರಿಯ ಪ್ರಕಟಣಾ ಫಲಕದಲ್ಲಿ, ಉಪ ವಿಭಾಗಾಧಿಕಾರಿ, ಚಿಕ್ಕಮಗಳೂರು, ತರೀಕೆರೆ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಯ ಪ್ರಕಟಣಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.