ಶಾಸಕರ ರಾಜಿನಾಮೆ ರಾಜಕೀಯ ಗಿಮಿಕ್: ಸಚಿವ ಜೀವರಾಜ್
ಚಿಕ್ಕಮಗಳೂರು: ಅಧಿಕಾರದ ಕೊನೆಯ ಕ್ಷಣದಲ್ಲಿ ಶಾಸಕರು ರಾಜಿನಾಮೆಗೆ ಮುಂದಾಗಿರುವುದು ರಾಜಕೀಯ ಗಿಮಿಕ್ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಡಿ.ಎನ್. ಜೀವರಾಜ್ ಆರೋಪಿಸಿದ್ದಾರೆ.
ರಾಜ್ಯ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರು ಸ್ಪೀಕರ್ ಕರ್ತವ್ಯವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಅವರು ಪ್ರವಾಸಕ್ಕೆ ಹೋಗಲು ಅನುಮತಿ ಪಡೆಯಬೇಕಾಗಿಲ್ಲ. ಅವರು ಸ್ವತಂತ್ರರು, ವೈಯಕ್ತಿಕ ಕೆಲಸದ ಮೇಲೆ ಅವರು ಪ್ರವಾಸಕ್ಕೆ ಹೋಗಿದ್ದಾರೆ. ರಾಜಿನಾಮೆ ನೀಡಲು ಬಂದಾಗ ಬೋಪಯ್ಯ ಹೋಗಿದ್ದಾರೆಂಬುದು ಬಾಲಿಶವಾದ ಅಭಿಪ್ರಾಯ ಎಂದು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ತಿಳಿಸಿದರು.
ರಾಜಿನಾಮೆ ನೀಡಲು ಮುಂದೆ ಬಂದಿರುವ ಶಾಸಕರು, ಸ್ಪೀಕರ್ ಅವರಿಗೆ ಕೇಳಿ ಸಮಯ ತೆಗೆದುಕೊಂಡಿದ್ದರೆ, ಆಗ ಅವರು ಸಮಯ ಕೊಟ್ಟು ನಂತರದಲ್ಲಿ ಹೋಗಿದ್ದರೆ ತಪ್ಪಾಗುತ್ತಿತ್ತು. ಆದರೆ, ಶಾಸಕರು, ತಾವು ರಾಜಿನಾಮೆ ನೀಡಲು ಬರುತ್ತಿರುವುದಾಗಿ ಸ್ಪೀಕರ್ ಅವರಿಗೆ ತಿಳಿಸಿರಲಿಲ್ಲ. ಈ ಸಂದರ್ಭದಲ್ಲಿ ಸ್ಪೀಕರ್ ಕಚೇರಿಯಿಂದಲೂ ಲೋಪ ಆಗಿಲ್ಲ. ಈ ವಿಚಾರದಲ್ಲಿ ಸ್ಪೀಕರ್ ವಿರುದ್ಧ ಟೀಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಮಳೆ ಇಲ್ಲದೆ ಬರಗಾಲ ಬಂದಿದೆ. ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಲ್ಲ. ಇಂತಹ ಸಂದರ್ಭದಲ್ಲಿ ಶಾಸಕರು ರಾಜಿನಾಮೆಗೆ ಮುಂದಾಗಿರುವುದು ಸರಿ ಕಾಣುತ್ತಿಲ್ಲ ಎಂದರು.
ಫೆ. 4 ರಂದು ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. 8 ರಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಜೆಟ್ ಮಂಡಿಸಲಿದ್ದಾರೆ ಎಂದು ಹೇಳಿದರು.