ಇಂದಿನ ಪಠ್ಯ ಕ್ರಮದಲ್ಲಿ ಬದಲಾವಣೆ ಅಗತ್ಯ
ಚಿಕ್ಕಮಗಳೂರು: ಮಕ್ಕಳಿಗೆ ವರ್ತಮಾನ ಕಾಲ ಹಾಗೂ ಭವಿಷ್ಯದಲ್ಲಿ ಅನುಕೂಲವಾಗುವ ಪಠ್ಯಗಳನ್ನು ರಚಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ನಗರದ ಎಂಇಎಸ್ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಕ್ಷೇಮಾಭಿವೃದ್ಧಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಿಕ್ಷಣ ನೀಡಬೇಕಾದ ಅಗತ್ಯವಿದೆ ಎಂದರು.
ಬದಲಾಗಬೇಕು: ಸುಮಾರು 40 ವರ್ಷಗಳ ಹಿಂದಿನ ಇತಿಹಾಸವನ್ನು ಮಕ್ಕಳಿಗೆ ಇಂದಿಗೂ ಪಠ್ಯದಲ್ಲಿ ಪರಿಚಯಿಸಲಾಗುತ್ತಿದೆ. ನಮ್ಮ ದೇಶದ ಮೇಲೆ ದಾಳಿ ಮಾಡಿದವರನ್ನು ಗ್ರೇಟ್ ಎನ್ನುತ್ತಿದ್ದೇವೆ. ಇದು, ಬದಲಾಗಬೇಕು. ನಮ್ಮ ದೇಶದ ಮಹಾತ್ಮರ ಪರಿಚಯವನ್ನು ಮಾಡಿಕೊಡಬೇಕು.
ವೈಜ್ಞಾನಿಕ ಸಾಧನೆ ಬಗ್ಗೆ ತಿಳಿಸಿಕೊಡಬೇಕು ಎಂದು ಹೇಳಿದರು. ಶಿಕ್ಷಣಕ್ಕೆ ನಮ್ಮ ಅರ್ಧ ವಯಸ್ಸು ಕಳೆದು ಹೋಗುತ್ತಿದೆ. ಓದು ಮುಗಿದ ಮೇಲೆ ಅವರಿಗೆ ಸರ್ಟಿಫಿಕೇಟ್ ಕೊಟ್ಟು ಕಳುಹಿಸುತ್ತಿದ್ದೇವೆ. ಶಿಕ್ಷಣದಲ್ಲಿ ವೃತ್ತಿ ಮಾರ್ಗದರ್ಶನ ಇರಬೇಕು, ಮಕ್ಕಳ ವಿಕಾಸಕ್ಕೆ ಬೇಕಾದ ಶಿಕ್ಷಣ ನೀಡಬೇಕಾಗಿದೆ, ಈ ನಿಟ್ಟಿನಲ್ಲಿ ಚರ್ಚೆ ಆಗಬೇಕು ಎಂದರು.
ಶಿಫಾರಸ್ಸು ಜಾರಿಗೆ: ಈ ಹಿಂದಿನ ಸರ್ಕಾರ ಶಿಕ್ಷಣಕ್ಕೆ ಬಜೆಟ್‌ನಲ್ಲಿ 3600 ಕೋಟಿ ರುಪಾಯಿ ಮೀಸಲಿಟ್ಟಿತ್ತು. ಆದರೆ, ಈ ಸರ್ಕಾರ 15,700 ಕೋಟಿ ರುಪಾಯಿ ಇಟ್ಟಿದೆ. ವೇತನ ಆಯೋಗದ ಶಿಫಾರಸ್ಸು ಜಾರಿಗೆ ತಂದಿದೆ ಎಂದ ಅವರು, ಬಜೆಟ್ ಸಮೀಪಿಸುತ್ತಿದ್ದಂತೆ ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ನಿರಂತರವಾಗಿ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆಗಳು ನಡೆಸುತ್ತಲೇ ಇರುತ್ತವೆ. ಎಲ್ಲರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ.
ಕಾರಣ, ಎಲ್ಲವೂ ಚೆನ್ನಾಗಿದ್ದರೆ ಈ ಸರ್ಕಾರ 30 ದಿನಗಳ ವರೆಗೆ ಉಳಿಯಬಹುದು ಎಂದು ಭವಿಷ್ಯ ನುಡಿದರು. ಶಿಕ್ಷಣ ವ್ಯವಸ್ಥೆ ವಿಫಲವಾಗಿಲ್ಲ, ಅಂದುಕೊಳ್ಳುವ ಮಟ್ಟದಲ್ಲಿ ಯಶಸ್ವಿಯೂ ಆಗಿಲ್ಲ. ಶೈಕ್ಷಣಿಕ ಸುಧಾರಣೆಗಾಗಿ ಇಂತಹ ಸಮ್ಮೇಳನಗಳು ನಡೆಯಲಿ ಎಂದರು.
ಮುಂದಿನ ಸಂಪುಟ ಸಭೆಯಲ್ಲಿ ಚಿಕ್ಕಮಗಳೂರಿಗೆ ಮೆಡಿಕಲ್ ಕಾಲೇಜ್ ಮಂಜೂರು ಆಗುವುದು ಖಚಿತ. ಇದಕ್ಕೆ ಬೇಕಾದ ಸ್ಥಳವನ್ನು ಗುರುತು ಮಾಡಲಾಗಿದೆ. ಮೆಡಿಕಲ್ ಕಾಲೇಜು ಬಂದರೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಸೂಪರ್ ಸ್ಪಷಾಲಿಟಿ ಆಸ್ಪತ್ರೆಯಾಗಲಿದೆ. ಇಲ್ಲಿ ಉತ್ತಮ ಚಿಕಿತ್ಸೆ ಸಿಗಲಿದೆ ಎಂದು ಹೇಳಿದರು.
ಮುಜುಗರ: ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಪ್ರಭಾಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ತಮ್ಮ ಬೇಡಿಕೆಗಳ ಪಟ್ಟಿಯನ್ನು ಮುಂದಿಡುವ ಜತೆಗೆ ಶಿಕ್ಷಕರ ಕ್ಷೇತ್ರದಿಂದ ಪ್ರತಿನಿಧಿಸಿರುವವರು ಉತ್ಸವ ಮೂರ್ತಿಗಳಾಗಿದ್ದಾರೆ.
ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ನೇರವಾಗಿ ಟೀಕಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣೇಶ್ ಕಾರ್ಣೀಕ್ ಅವರು ಶಿಕ್ಷಕರ ಕ್ಷೇತ್ರದಿಂದ ಪ್ರತಿನಿಧಿಸಿದ್ದವರೆ, ಸಚಿವ ಸಿ.ಟಿ. ರವಿ ಮಾತನಾಡಿ ವೇದಿಕೆಯಿಂದ ನಿರ್ಗಮಿಸಿದ ನಂತರ ಗಣೇಶ್ ಕಾರ್ಣೀಕ್ ಮಾತನಾಡಿ, ರಾಜಕಾರಣ ಮಾಡಲು ನಾವಿದ್ದೇವು. ನೀವೇಕೆ ರಾಜಕಾರಣ ಮಾಡುತ್ತೀರಾ, ಕಳೆದ 3 ವರ್ಷಗಳಲ್ಲಿ ಇಡೀ ಭಾರತದಲ್ಲಿ ಶಿಕ್ಷಣಕ್ಕೆ ಹೆಚ್ಚು ಹಣ ನೀಡಿರುವ ಏಕೈಕ ರಾಜ್ಯ ಕರ್ನಾಟಕ ಎಂದರು.
ಪ್ರಭಾಕರ್ ಮಾತನಾಡಿದ್ದು ಚುನಾವಣಾ ಭಾಷಣದಂತೆ ಇತ್ತು. ಬೌದ್ಧಿಕವಾಗಿ ಪಕ್ವತೆ ಹೊಂದಿರುವವರು ಲೀಡರ್ ಆಗಬೇಕು.
ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವವರಿಗೆ ಇಕ್ರಿಮೆಂಟ್ ನೀಡಬೇಕೆಂಬ ಬೇಡಿಕೆಯ ಹೋರಾಟಕ್ಕೆ ಸ್ವತಹ ನಾನೇ ಕೈ ಜೋಡಿಸಿದ್ದೇನೆ. ಸರ್ಕಾರವೂ ಬೆಂಬಲಕ್ಕೆ ನಿಂತಿದೆ. ಪ್ರೀತಿ, ವಿಶ್ವಾಸ ತೋರಿದರೆ ನಿಮ್ಮ ಕೆಲಸಗಳು ಸುಲುಭವಾಗಿ ಆಗುತ್ತವೆ. ಬಾಯಿಗೆ ಬಂದಂತೆ ಮಾತನಾಡಬಾರದು. ಎಚ್ಚರಿಕೆಯಿಂದ ಮಾತನಾಡಬೇಕು. ಪ್ರಭಾಕರ್ ಆಡಿರುವ ಮಾತಿನಿಂದ ಮನಸ್ಸಿಗೆ ಬಹಳ ನೋವಾಗಿದೆ. ಸಚಿವ ರವಿಗೂ ಬೇಜಾರಾಯ್ತು. ಸರ್ಕಾರದ ಜತೆ ವಿರೋಧ ಕಟ್ಟಿಕೊಳ್ಳಬೇಡಿ ಎಂದು ಹೇಳಿದರು.
ಶಿಕ್ಷಣ ಸಂಸ್ಥೆಗಳ ಪರ: ಸರ್ಕಾರ ನಿಮ್ಮಗಳ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತಾ ಬಂದಿದೆ. ರಾಜಕೀಯ ಗೊಂದಲದ ನಡುವೆಯೂ ಶಿಕ್ಷಕರ ಸಮಸ್ಯೆಗೆ ಸಂಬಂಧಿಸಿದ್ದೇನೆ. ನಿಮಗೆ ಮಾಹಿತಿ ಬೇಕಾದರೆ ಕಲಾಪದ ಪುಸ್ತಕ ತೆಗೆದು ನೋಡಿ, ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಪರವಾಗಿ ನಮ್ಮ ಸರ್ಕಾರ ಕೆಲಸ ಮಾಡಿದೆ ಎಂದರು.
ಕಾರ್ಣೀಕ್ ಅವರು ಭಾಷಣ ಮುಗಿಸಿ ಹೊರಡುವ ವೇಳೆಯಲ್ಲಿ ಸನ್ಮಾನ ಸ್ವೀಕರಿಸಬೇಕು ಎಂದು ಕಾರ್ಯಕ್ರಮದ ಆಯೋಜಕರು ಹೇಳಿದರು. ಇದೆಲ್ಲಾ ಬೇಡ, ನಾನು ತುರ್ತಾಗಿ ಹೊರಡಬೇಕಾಗಿದೆ ಎಂದಾಗ, ವೇದಿಕೆಯಲ್ಲಿ ಉಪಸ್ಥಿತರಿದ್ದವರು ಸನ್ಮಾನ ಸ್ವೀಕಾರ ಮಾಡಿ ಹೋಗಿ ಎಂದು ಕೇಳಿಕೊಂಡರು. ಪ್ರಭಾಕರ್ ಆಡಿದ ಮಾತಿನಿಂದ ಬೇಸರಗೊಂಡು ಸನ್ಮಾನ ಸ್ವೀಕರಿಸಲು ನಿರಾಕರಿಸುತ್ತಿದ್ದಾರೆಂದು ಅಲ್ಲಿ ನೆರೆದಿದ್ದರು ಭಾವಿಸಿದ್ದರು.
ಅಷ್ಟರಲ್ಲೇ ಕಾರ್ಣೀಕ್ ಸನ್ಮಾನ ಸ್ವೀಕರಿಸಿ, ಮತ್ತೆ ಭಾಷಣವನ್ನು ಮುಂದುವರೆಸಿ ಪ್ರಭಾಕರ್ ಹೇಳಿದ ಮಾತಿನಿಂದ ಬೇಸರದಿಂದ ಸನ್ಮಾನ ಸ್ವೀಕರಿಸಿಲ್ಲ ಎಂದು ಭಾವಿಸಬೇಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯಲ್ಲಿ ಕೆಲಸ ಮಾಡಿದ ನನಗೆ ಸನ್ಮಾನ ಇಷ್ಟವಿಲ್ಲ ಎಂದು ಗೊಂದಲಕ್ಕೆ ತೆರೆ ಎಳೆದರು.
ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಚ್. ಚಂದ್ರಶೇಖರ್ ಆರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ನಗರಸಭಾಧ್ಯಕ್ಷ ಪ್ರೇಮ್‌ಕುಮಾರ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರುದ್ರಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್, ಎಂಇಎಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಡಿ.ಎಲ್. ವಿಜಯಕುಮಾರ್, ಭಾರತೀಯ ವಕೀಲರ ಸಂಘದ ಸದಸ್ಯ ಎಸ್.ಎಲ್. ಭೋಜೇಗೌಡ ಉಪಸ್ಥಿತರಿದ್ದರು.