ಇಂದು ನಾಟಿ ವೈದ್ಯರ ಸಮಾವೇಶ
ಶೃಂಗೇರಿ: ಪಶ್ಟಿಮ ಘಟ್ಟ ಕಾರ್ಯಪಡೆ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಪಟ್ಟಣದ ಹನುಮಂತನಗರ ಅಂಬೇಡ್ಕರ್ ಭವನದಲ್ಲಿ ನಾಟಿ ವೈದ್ಯರ ಸಮಾವೇಶ ಮತ್ತು ಹಸಿರು ಆರೋಗ್ಯ ಶಿಬಿರ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ಶಾರದಾ ವಿಶ್ವನಾಥ್ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಲಯಾರಣ್ಯಧಿಕಾರಿ ಮೋಹನ್ ಬಿದರಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ಕೆ. ಪರಾಶರ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ತಾಲೂಕಿನಲ್ಲಿರುವ ನಾಟಿ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಆರೆಸ್ಸೆಸ್ ತಾಲೂಕು ಮಹಾ ಸಾಂಘಿಕ್
ಶೃಂಗೇರಿ: ಆರ್‌ಎಸ್‌ಎಸ್ ದೇಶಭಕ್ತಿಯ, ಸಮಾಜಮುಖಿ ಸಂಘಟನೆಯಾಗಿದೆಯೇ ಹೊರತು ಕೇವಲ ಧಾರ್ಮಿಕ ಸಂಘಟನೆಯಾಗಿ ಉಳಿದಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪ್ರಮುಖ ಜಗದೀಶ್ ಹೇಳಿದರು. ಅವರು ಭಾನುವಾರ ಪಟ್ಟಣದ ಮಾನಗಾರು ಜ್ಞಾನಭಾರತಿ ಆವರಣದಲ್ಲಿ ನಡೆದ ಆರ್‌ಎಸ್‌ಎಸ್ ತಾಲೂಕು ಮಹಾ ಸಾಂಘಿಕ್ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಶಾಖೆಗಳೇ ಆರ್‌ಎಸ್‌ಎಸ್ ಶಕ್ತಿಯ ಮೂಲಗಳಾಗಿದ್ದು, ವಿಶ್ವವನ್ನು ಒಗ್ಗೂಡಿಸುವುದೇ ಸಂಘದ ಪ್ರಮುಖ ತತ್ವವಾಗಿದೆ ಎಂದರು. ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಬಗ್ಗೆ ಅರಿವು ಮೂಡಿಸಿ, ಅದನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜನರಲ್ಲಿ ದೇಶಪ್ರೇಮದ ಬೀಜ ಬಿತ್ತಿ ದೇಶ ಕಟ್ಟುವುದು ಸಂಘದ ಉದ್ದೇಶವಾಗಿದೆ ಎಂದರು.
ಬೆಳಗ್ಗೆ ಜಿಎಸ್ಬಿ ಸಭಾ ಭವನದಲ್ಲಿ ಚಿಂತನಾ ಬೈಠಕ್, ಮಧ್ಯಾಹ್ನ ಪಟ್ಟಣದ ಪ್ರಮುಖ ಬೀದಿಯಲ್ಲಿ ಪಥ ಸಂಚಲನ ನಡೆಯಿತು. ಆರೆಸ್ಸೆಸ್ ಶಿವಮೊಗ್ಗ ವಿಭಾಗದ ಪ್ರಮುಖ್ ದಿನೇಶ್ ಭಾರತೀಪುರ ಮೊದಲಾದವರು ಉಪಸ್ಥಿತರಿದ್ದರು.