ಪ್ರತಿಮಾ ಸಂಸ್ಕೃತಿ ಬೆಳೆಸುವುದು ಬೇಡ
ಚಿಕ್ಕಮಗಳೂರು: ವಿಚಾರ ಸಂಸ್ಕೃತಿಯನ್ನು ಮರೆತು, ಪ್ರತಿಮಾ ಸಂಸ್ಕೃತಿಯನ್ನು ಬೆಳಸುವುದು ಬೇಡ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದರು.
ಗಣರಾಜ್ಯೋತ್ಸವದ ಅಂಗವಾಗಿ ಯುರೇಕಾ ಅಕಾಡೆಮಿ ವತಿಯಿಂದ ಭಾನುವಾರ ನಗರದ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಕುರಿತ ವಿಚಾರ ಸಂಕಿಣದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ರಂತಹ ವಿಚಾರಗಳು ಬದುಕಿನಲ್ಲಿ ಬದಲಾವಣೆಯನ್ನು ತರುತ್ತವೆ. ಅವರ ಹೆಸರಲ್ಲಿ ಹಬ್ಬ ಮಾಡಿ ದೇವರನ್ನಾಗಿ ಕಂಡರೆ ಸಾಲದು, ಮನುಷ್ಯರಾಗಿ ಬದುಕಿ, ಬದುಕಿನ ಮೂಲಕವೇ ಸಮಾಜವನ್ನು ಎತ್ತರಿಸಲು ಯತ್ನಿಸಿದ ಅವರ ವಿಚಾರಗಳನ್ನು ನಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳುವಂತಾಗಬೇಕು ಎಂದರು.
ಮುಖ್ಯ ಅತಿಥಿ, ಹಿರಿಯ ವಕೀಲ ಡಿ. ಧೃವನಾರಾಯಣ್, ಅಂಬೇಡ್ಕರ್ ಅವರೊಂದಿಗೆ ಮಹಾತ್ಮಗಾಂಧಿ ಸೇರಿದಂತೆ ಅನೇಕ ನಾಯಕರ ಸ್ಥಿತಿಯೂ ಇದೇ ಆಗಿದೆ. ಅವರ ಬ್ಯಾನ್ಯ್ಗಳು ಈಗ ದೇಶದಲ್ಲಿ ತಮಾಷೆಯ ವಸ್ತುಗಳಾಗಿವೆ. ಸಮಾಜದ ಉನ್ನತಿಗೆ ಪೂರಕವಾದ ಸಿದ್ಧಾಂತಗಳನ್ನು ರೂಪಿಸಿದವರು ಹಾಸ್ಯದ ವಸ್ತುಗಳಾದರೆ, ಆ ಸಿದ್ಧಾಂತದ ಫಲಾನುಭವಿಗಳ ವರ್ತನೆಯಂತೂ ಅಸಹ್ಯಕರ ಹಾಗೂ ನಾಚಿಕೆಗೇಡಿನದ್ದಾಗಿದೆ ಎಂದರು.
ಕಟ್ಟಕಡೆಯ ವ್ಯಕ್ತಿಗೂ ನ್ಯಾಯ: ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿ.ಪಂ. ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಎಲ್ಲ ರೀತಿಯಲ್ಲಿ ಮೇಲೆತ್ತಲು ಅಗತ್ಯದ ಕಾನೂನು ರೂಪಿಸಿದವರು ಅಂಬೇಡ್ಕರ್. ಹಿಂದುಳಿದವರು ಮೇಲ್ವರ್ಗದ ಜೊತೆ ಗುರುತಿಸಿಕೊಳ್ಳಲು ಇದರಿಂದ ಸಾಧ್ಯವಾಯಿತು. ಆಡಳಿತ ವ್ಯವಸ್ಥೆಯಲ್ಲಿ ಸಾಮಾನ್ಯರೂ ಪಾಲ್ಗೊಳ್ಳಲು ಕಾರಣವಾಯಿತು ಎಂದು ಹೇಳಿದರು.
ರುದ್ರಸ್ವಾಮಿ, ಉಪನ್ಯಾಸಕ ಬೆಳವಾಡಿ ಮಂಜುನಾಥ್ ಅಂಬೇಡ್ಕರ್ ಕುರಿತು ವಿಚಾರ ಮಂಡಿಸಿದರು. ದೀಪಕ್ ದೊಡ್ಡಯ್ಯ ಅಧ್ಯಕ್ಷತೆ ವಹಿಸಿದ್ದರು. ಪುಟ್ಟೇಗೌಡ, ಕಾಮಧೇನು ಗಣಪತಿ ದೇವಸ್ಥಾನದ ಧರ್ಮಾಧಿಕಾರಿ ನಂಜುಂಡಸ್ವಾಮಿ ಉಪಸ್ಥಿತರಿದ್ದರು.