ಕಳಪೆ ಕಾಮಗಾರಿ: ತನಿಖೆಗೆ ಆಗ್ರಹ
ಚಿಕ್ಕಮಗಳೂರು: ತಾಲೂಕಿನ ಬ್ಯಾರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದ್ದು, ಈ ಬಗ್ಗೆ ಪರಿಶೀಲನೆಗಾಗಿ ತನಿಖಾಧಿಕಾರಿಗಳನ್ನು ನೇಮಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಪಂಚಾಯಿತಿ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಮಲ್ಲಂದೂರಿನಲ್ಲಿರುವ ಗ್ರಾಪಂ ಕಚೇರಿ ಎದುರು ಧರಣಿ ನಡೆಸಿದ ಗ್ರಾಮಸ್ಥರು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕಳಪೆ ಕಾಮಗಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಾಚಿಕೆಗೇಡಿತನ ಸಂಗತಿ: ನಂತರ ಎಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಹೊಲದಗದ್ದೆ ಗಿರೀಶ್ ಮಾತನಾಡಿ, ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿಯಲ್ಲಿ ಲಕ್ಷಾಂತರ ರುಪಾಯಿ ಅವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಹಲವು ಪ್ರಕರಣಗಳನ್ನು ಬಯಲಿಗೆಳೆದಿದ್ದರೂ ತಲೆಕೆಡಿಸಿಕೊಳ್ಳದ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭ್ರಷ್ಟಾಚಾರವನ್ನು ಮುಂದುವರಿಸುತ್ತಲೇ ಬಂದಿರುವುದು ನಾಚಿಕೆಗೇಡಿನ ಸಂಗತಿ ಎಂದು ದೂರಿದರು.
ಜಿಪಂ ಕುಡಿಯುವ ನೀರಿನ ಯೋಜನೆಯಲ್ಲಿ ರು. 19.72 ಲಕ್ಷ ಅವ್ಯವಹಾರ ಸೇರಿದಂತೆ ಶಾಸಕರ ಅನುದಾನದಲ್ಲಿ ಶೀರೂರು ಕೆರೆ ಹೂಳು ಎತ್ತಿರುವುದು ಮತ್ತು ನಿಡಗೋಡು ಶಾಲೆಯ ರಕ್ಷಣಾ ಗೋಡೆಕಟ್ಟಿ ಇವೆರಡರ ಬಿಲ್‌ಪಾವತಿಯಾಗಿದ್ದರೂ ಮತ್ತೊಮ್ಮೆ 2ನೇ ಬಾರಿ ಬಿಲ್ ಮಾಡಿಸಿಕೊಳ್ಳಲು ಹುನ್ನಾರ ನಡೆಸುತ್ತಿದ್ದು, ಈ ಬಗ್ಗೆ ಪರಿಶೀಲಿಸುವಂತೆ ಒತ್ತಾಯಿಸಿದರು.
ಕುಡಿಯುವ ನೀರಿನ ಹಾಹಾಕಾರವಿದ್ದರೂ ನಿರ್ಲಕ್ಷ ಧೋರಣೆ ತೊರೆದಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಜಿ.ಪಂ. ಮತ್ತು ತಾ.ಪಂ. ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೆ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ಅವರು, ಸಂಬಂಧಪಟ್ಟವರು ತನಿಖಾಧಿಕಾರಿಗಳನ್ನು ನೇಮಿಸಿ ನ್ಯಾಯ ಒದಗಿಸದಿದ್ದಲ್ಲಿ ಹೋರಾಟದ ಸ್ವರೂಪ ಬದಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗಮನ ಹರಿಸದ ಜನಪ್ರತಿನಿಧಿಗಳು: ಮಾಜಿ ಅಧ್ಯಕ್ಷ ಪುಟ್ಟೇಗೌಡ ಮಾತನಾಡಿ, ಮಲ್ಲಂದೂರು ಸಂತೆಕಟ್ಟೆ ನಿರ್ಮಾಣಕ್ಕೆಂದು ರು. 8 ಲಕ್ಷ ಬಿಡುಗಡೆ ಮಾಡಿ ಕಳಪೆ ಕಾಮಗಾರಿ ಮಾಡಿ, ಕ್ಷೇತ್ರದ ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಎದುರಾಗಿದ್ದರೂ ಜನಪ್ರತಿನಿಧಿ ಮತ್ತು ಅಧಿಕಾರಿಗಳು ಗಮನ ಹರಿಸದೆ ಇರುವುದು ಕ್ಷೇತ್ರದ ಜನರ ದುರ್ದೈವ ಎಂದು ಟೀಕಿಸಿದರು.
ವಿಎಸ್‌ಎಸ್‌ಎನ್ ಅಧ್ಯಕ್ಷ ಶಶಿಧರ್, ಕಾಂಗ್ರೆಸ್ ಮುಖಂಡ ರೂಪೇಶ್, ನಾರಾಯಣ್, ಅಹಮದ್, ದಯಾನಂದ್ ಮಾಕೋಡು, ಎಂ.ಎ. ರವೀಶ್, ಗಜೇಂದ್ರ, ಮಲೆನಾಡು ಗೆಳೆಯರ ಬಳಗದ ಅಧ್ಯಕ್ಷ ಪೂರ್ಣೇಶ್, ದೀಕ್ಷಿತ್ ಗೌಡ ಇತರರು ಹಾಜರಿದ್ದರು.