ತೋಟಗಾರಿಕಾ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಿ
ಮೂಡಿಗೆರೆ: ತೋಟಗಾರಿಕಾ ಇಲಾಖೆಯಲ್ಲಿ ಸಹಾಯಕ ತೋಟಗಾರಿಕಾ ಅಧಿಕಾರಿ, ಸಹಾಯಕ ತೋಟಗಾರಿಕಾ ನಿರ್ದೇಶಕ ಹುದ್ದೆಗಳನ್ನು ಭರ್ತಿ ಮಾಡುವಾಗ, ಬಿಎಸ್ಸಿ ತೋಟಗಾರಿಕಾ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸುವಂತೆ ಒತ್ತಾಯಿಸಿ ತೋಟಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಪಟ್ಟಣದ ಹ್ಯಾಂಡ್‌ಪೋಸ್ಟ್‌ನಲ್ಲಿರುವ ತೋಟಗಾರಿಕಾ ಕಾಲೇಜಿನಲ್ಲಿ ಸೋಮವಾರ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಪ್ರಾಂಶುಪಾಲ ಪರಮೇಶ್ವರಪ್ಪ ಅವರಿಗೆ ಮನವಿ ಸಲ್ಲಿಸಿ ನಂತರ ಕಾಲ್ನಡಿಗೆಯಲ್ಲಿ ಪಟ್ಟಣಕ್ಕೆ ಆಗಮಿಸಿ ತಹಸೀಲ್ದಾರರಿಗೆ ಮನವಿ ನೀಡಿದರು.
ಸರ್ಕಾರವು ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ನೇಮಕ ಮಾಡುವಾಗ ಈಗಿರುವ ವೃಂದ ಮತ್ತು ನೇಮಕಾತಿ ಆದೇಶದಂತೆ ಯಾವುದೇ ತೋಟಗಾರಿಕೆ ಪದವಿ ಎಂದಿರುತ್ತದೆ. ಆದರೆ ಈ ಹುದ್ದೆಗೆ ಸ್ಪಷ್ಟವಾಗಿ ಬಿಎಸ್‌ಇ ಪದವೀಧರರನ್ನು ತೆಗೆದುಕೊಳ್ಳಲು ವೃಂದ ನೇಮಕಾತಿ ಆದೇಶದಲ್ಲಿ ತಿದ್ದುಪಡಿ ಮಾಡಬೇಕು. ರೈತರಿಗೆ ನೆರವಾಗುವಂತೆ ಸರ್ಕಾರ ಈಗಾಗಲೆ ಪ್ರತ್ಯೇಕ ತೋಟಗಾರಿಕೆ ವಿಶ್ವವಿದ್ಯಾನಿಲಯ ಸ್ಥಾಪಿಸಿದೆ. ಅದರ ಅಡಿಯಲ್ಲಿ 2 ಮಹಾ ವಿದ್ಯಾನಿಲಯವನ್ನು ಸ್ಥಾಪಿಸಲಾಗಿದೆ.
ಈ ತಾಂತ್ರಿಕ ವಿಶ್ವ ವಿದ್ಯಾನಿಲಯದಲ್ಲಿ 4 ವರ್ಷ ತಾಂತ್ರಿಕ ಪದವಿ ಪಡೆದಿದ್ದರೂ ಎಸ್‌ಎಸ್‌ಎಲ್‌ಸಿ, ಪಿಯುಸಿ, ಜೆಒಸಿ ಮತ್ತು ತೋಟಗಾರಿಕೆ ತರಬೇತಿ ಪಡೆದಿರುವವರನ್ನು ಉನ್ನತ ಹುದ್ದೆ ನೀಡಿ ಬಡ್ತಿ ಕೊಡುವುದರಿಂದ ತಾಂತ್ರಿಕ ಪದವಿ ಪಡೆದಿರುವ ನಮಗೆ ಅನ್ಯಾಯವಾಗುತ್ತಿದೆ.
ರಾಜ್ಯದ ತೋಟಗಾರಿಕೆ ರೈತರ ಏಳಿಗೆಗಾಗಿ, ರಾಷ್ಟ್ರದ ಜಿಡಿಪಿ ಆಹಾರ ಕೊರತೆ, ಈ ಎಲ್ಲವನ್ನು ತಗ್ಗಿಸಲು ತೋಟಗಾರಿಕೆ ಪದವಿ ಪಡೆದಿರುವ ವಿದ್ಯಾರ್ಥಿಗಳು ಹಾಗೂ ಪದವಿಯನ್ನು ಹೊಂದಿದ ಅಭ್ಯರ್ಥಿಗಳ ಕ್ಷೇಮಾಭಿವೃದ್ಧಿಗಾಗಿ ಸರಕಾರವು ತಮ್ಮ ಕೋರಿಕೆಯನ್ನು ಪರಿಗಣಿಸಬೇಕೆಂದು ಮನವಿಯಲ್ಲಿ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಇಂದು ಜಾಗೃತಿ ಆಂದೋಲನ
ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲೆಯ ಸ್ತ್ರೀಶಕ್ತಿ ಸಂಘಗಳ ಒಕ್ಕೂಟ ಮತ್ತು ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜ.29ರಂದು ಬೆಳಗ್ಗೆ 11 ಗಂಟೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ವಿರುದ್ಧ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಬೃಹತ್ ಆಂದೋಲನ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಾಜಶೇಖರ್ ಎಂ. ಶೆಟ್ಟರ್ ಉದ್ಘಾಟಿಸುವರು. ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸಂಜಯ ಬಿಜ್ಜೂರ್ ಮುಖ್ಯ ಅತಿಥಿಯಾಗಿ ಆಗಮಿಸುವರು. ರಾಜ್ಯ ಬಾಲಭವನ ಸೊಸೈಟಿ ನಿರ್ದೇಶಕ ಪಿ. ಶಿವಣ್ಣ ಉಪನ್ಯಾಸ ನೀಡುವರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಲಕ್ಷ್ಮೀಕಾಂತಮ್ಮ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಸ್. ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.