ರಾಜಕೀಯ ಪ್ರೇರಿತ ರಾಜಿನಾಮೆ ಸರಿಯಲ್ಲ: ಜೀವರಾಜ್
ತರೀಕೆರೆ: ರಾಜಕೀಯ ಪ್ರೇರಿತ ರಾಜಿನಾಮೆ ಸರಿಯಲ್ಲ ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್. ಜೀವರಾಜ್ ತಿಳಿಸಿದ್ದಾರೆ.
ಸೋಮವಾರ ಪಟ್ಟಣದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇದೆ, ಜವಾಬ್ದಾರಿಯಿಂದ ಹಿಂದಕ್ಕೆ ಹೋಗುವುದು ಸರಿಯಿಲ್ಲ. ಬಿಜೆಪಿ ಸರ್ಕಾರ ತನ್ನ ಪೂರ್ಣಾವಧಿ ಅಧಿಕಾರದಲ್ಲಿರುತ್ತದೆ. ಫೆ.4ರಿಂದ ಆಧಿವೇಶನ ನಡೆಯಲಿದ್ದು, ಫೆ.8ರಂದು ಆಯವ್ಯಯ ಮಂಡಿಸುವುದು ಖಂಡಿತ ಎಂದು ಹೇಳಿದರು.
ಕೇಂದ್ರಕ್ಕೆ ಒತ್ತಾಯ: ನ್ಯಾಯಬೆಲೆ ಅಂಗಡಿಗಳನ್ನು ನಡೆಸಲು ಸ್ತ್ರೀಶಕ್ತಿ ಗುಂಪುಗಳಿಗೂ ಆವಕಾಶ ಕೊಡಲಾಗುವುದು, ಈಗಾಗಲೇ ಒಂದೂವರೆ ಲಕ್ಷ ಟನ್ ಲೆವಿ ನೀಡಲಾಗಿದೆ ಎಂದ ಅವರು, ವಿದೇಶಕ್ಕೆ ಅಕ್ಕಿ ರಫ್ತಾಗುತ್ತಿರುವುದು ಸರಿಯಲ್ಲ, ಅಕ್ಕಿ ರಫ್ತು ಮಾಡುವುದನ್ನು ನಿಲ್ಲಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎನ್. ಮಂಜುನಾಥ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಾಂತರಾಜ್, ಪುರಸಭೆ ಸದಸ್ಯ ಟಿ.ಜ. ಸದಾನಂದ್ ಮತ್ತಿತರರು ಉಪಸ್ಥಿತರಿದ್ದರು.