4,000 ನಿವೇಶನ ಒದಗಿಸಲು ಕ್ರಮ
ಚಿಕ್ಕಮಗಳೂರು: ನಗರ ವ್ಯಾಪ್ತಿಯ ವಸತಿ ರಹಿತರಿಗೆ ಇನ್ನೂ 4,000 ನಿವೇಶನಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ನಗರಸಭೆ ಆವರಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಅವರು, ಈಗಾಗಲೇ ನಗರ ವ್ಯಾಪ್ತಿಯಲ್ಲಿ 3200 ಮಂದಿಗೆ ನಿವೇಶನ ಒದಗಿಸಲಾಗಿದೆ. ಇನ್ನೂ ಹೆಚ್ಚುವರಿಯಾಗಿ 4000 ಕುಟುಂಬಗಳಿಗೆ ನಿವೇಶನ ಒದಗಿಸಲು ಅಗತ್ಯ ಭೂಮಿ ನೀಡುವಂತೆ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಯವರನ್ನು ಕೋರಲಾಗಿದೆ ಎಂದರು.
ಅಭಿವೃದ್ಧಿ: ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಹಿಂದೆಂದೂ ಆಗದಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ನಗರದಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಇಂದಾವರದಲ್ಲಿ ಈಗಾಗಲೇ 32 ಎಕರೆ ಜಾಗ ಗುರುತಿಸಲಾಗಿದೆ. ಫೆಬ್ರವರಿ 1 ರಂದು ನಡೆಯುವ ಬೆಳಗಾವಿ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾನಿಲಯದ ಸಭೆಯಲ್ಲಿ ಇದು ಅಂತಿಮವಾಗಲಿದೆ. ವೈದ್ಯಕೀಯ ಕಾಲೇಜು ಸ್ಥಾಪನೆ ಸಂಬಂಧ ಶೀಘ್ರವೇ ಸಚಿವ ಸಂಪುಟದ ಮುಂದೆ ಬರಲಿದೆ ಎಂದು ಹೇಳಿದರು.
ಚಿಕ್ಕಮಗಳೂರು- ಕಡೂರು ರೈಲ್ವೇ ಮಾರ್ಗ ಕಾಮಗಾರಿಗೆ ರಾಜ್ಯ ಸರ್ಕಾರ 87 ಕೋಟಿ ರು. ನೀಡಿದ್ದು, ಇದರಿಂದ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುವಂತಾಯಿತು ಎಂದರು.
ಜಿಲ್ಲೆಗೆ 1 ಪಾಲಿಟೆಕ್ನಿಕ್, 2 ಐ.ಟಿ.ಐ. ಹಾಗೂ 1 ವಸತಿ ಶಾಲೆಯನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ ಎಂದು ಅವರು ಹೇಳಿದರು.
ನಗರಸಭೆ ಅಧ್ಯಕ್ಷ ಸಿ.ಆರ್. ಪ್ರೇಂಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪೌರಾಯುಕ್ತ ಎಚ್.ಜಿ. ಪ್ರಭಾಕರ್ ಹಾಗೂ ನಗರಸಭೆಯ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ವ್ಯವಸ್ಥಾಪಕ ಕಾಂತರಾಜು ವಂದಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 700 ಮಂದಿಗೆ ಉಚಿತ ಕನ್ನಡಕಗಳ ವಿತರಣೆ, ಪ್ರತಿಭಾವಂತ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ, ವಿದ್ಯಾರ್ಥಿ ವೇತನ, ಶೂ ಮತ್ತು ಸಾಕ್ಸ್, ಮನೆ ನಿರ್ಮಾಣಕ್ಕೆ ಸಹಾಯಧನ ಚೆಕ್ ಹಾಗೂ ನಿರಂತರ ಉಳಿತಾಯ ಗುಂಪುಗಳಿಗೆ ಆವರ್ತಕ ನಿಧಿಯ ಚೆಕ್ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ
ಹಲವರು ಇದ್ದರು.
ಸರ್ಕಾರ ಶಾಮಿಯಾನ ಇದ್ದಂತೆ
ಚಿಕ್ಕಮಗಳೂರು: ನಮ್ಮ ಸರ್ಕಾರ ಸರ್ಕಸ್ ಕಂಪನಿಯ ಟೆಂಟ್ ಅಲ್ಲ, ಶಾಮಿಯಾನ ಇದ್ದಂತೆ.
- ಪ್ರಚಲಿತ ರಾಜಕೀಯ ಬೆಳವಣಿಗೆಯ ಬಗ್ಗೆ ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ಮೇಲಿನಂತೆ ವಿಶ್ಲೇಷಣೆ ಮಾಡಿದರು.
ನಮ್ಮ ಸರ್ಕಾರ ಶಾಮಿಯಾನ ಇದ್ದಂತೆ. ಶಾಮಿಯಾನ ಭದ್ರವಾಗಿ ನಿಲ್ಲಲು ಹಗ್ಗವನ್ನು ಕಟ್ಟಿರುತ್ತಾರೆ. ಅದರಲ್ಲಿ ಯಾವುದಾದರೊಂದು ಹಗ್ಗ ಕಳಚಿ ಹೋದರೂ, ಶಾಮಿಯಾನ ಬೀಳುವುದಿಲ್ಲ. ಆದರೆ, ಸರ್ಕಸ್ ಕಂಪನಿಯ ಟೆಂಟ್ ಹಾಗಲ್ಲ, ಅದು, ಒಂದೇ ಕಂಬದ ಮೇಲೆ ನಿಂತಿರುತ್ತದೆ. ಕಂಬ ಕಳಚಿ ಬಿದ್ದರೆ ಇಡೀ ಟೆಂಟ್ ನೆಲಕ್ಕೆ ಬೀಳಲಿದೆ.
ಪಕ್ಷದ ಬಲ ಬಲ ಪ್ರದರ್ಶನವಾಗುವುದು ವಿಧಾನಸಭೆಯಲ್ಲಿ ಈಗಲೇ ಸಂಖ್ಯೆಯ ಬಗ್ಗೆ ಲೆಕ್ಕಚಾರ ಮಾಡುವುದು ಸರಿಯಲ್ಲ. ರಾಜ್ಯ ಸರ್ಕಾರಕ್ಕೆ ಬಹುಮತ ಇದೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಜೆಟ್ ಮಂಡನೆ ಮಾಡುವುದು ಖಚಿತ. ಪಕ್ಷದ ಬಲವರ್ಧನೆ ಹಾಗೂ ರಾಜ್ಯದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಎಲ್ಲರಿಗೂ ಅನುಕೂಲವಾಗುವಂತಹ ಬಜೆಟ್ ಮಂಡನೆ ಮಾಡಲಾಗುವುದು ಎಂದುಹೇಳಿದರು.