ಅರ್ಹ ವ್ಯಕ್ತಿಗೆ ಟಿಕೆಟ್ ನೀಡಲು ಜೆಡಿಎಸ್ ಕಾರ್ಯಕರ್ತರ ಆಗ್ರಹ
ಚಿಕ್ಕಮಗಳೂರು: ಗೆಲ್ಲಬಹುದಾದ ಕ್ಷೇತ್ರಕ್ಕೆ ಕೊನೆ ಕ್ಷಣದಲ್ಲಿ ಅಭ್ಯರ್ಥಿ ಘೋಷಿಸುವ ಬದಲು ಅರ್ಹ ವ್ಯಕ್ತಿಗೆ ಟಿಕೆಟ್ ನೀಡಿದರೆ ಜೆಡಿಎಸ್ ಅಭ್ಯರ್ಥಿ ಗೆಲುವು ಶತಸಿದ್ಧ ಎಂಬ ಅಭಿಪ್ರಾಯ ಪಕ್ಷದ ಮುಖಂಡರಿಂದ ವ್ಯಕ್ತವಾಗಿದೆ.
ನಗರದ ಹೊರವಲಯದ ಕದ್ರಿಮಿದ್ರಿಯಲ್ಲಿರುವ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಆಲ್ದೂರು, ವಸ್ತಾರೆ, ಅಂಬಳೆ, ಆವತಿ ಹೋಬಳಿಯ ಪ್ರಮುಖ ಮುಖಂಡರ ಸಭೆಯಲ್ಲಿ ಈ ಅಭಿಪ್ರಾಯ ಕೇಳಿ ಬಂದಿದೆ.
ಪಿಸಿಎಆರ್‌ಡಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಕೆ.ಟಿ. ಭೈರೇಗೌಡ ಮಾತನಾಡಿ, ಅಳುಕು, ಸಂಕೋಚ ಬಿಟ್ಟು ಮುಕ್ತ ಕಂಠದಿಂದ ಅಭಿಪ್ರಾಯ ವ್ಯಕ್ತಪಡಿಸುವ ಉದ್ದೇಶ ಹೊಂದಿ ಸಭೆ ಸೇರಿದ್ದೇವೆ. ಜಿಲ್ಲಾ ಪಂಚಾಯಿತಿಯಿಂದ, ಲೋಕಸಭಾ ಚುನಾವಣೆವರೆಗೂ ಸೋಲನ್ನು ಅನುಭವಿಸಿದ್ದೇವೆ. ಸೋಲನ್ನು ಎಷ್ಟು ದಿನ ತಾನೆ ಸಹಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದರು.
ಕಾರ್ಯಕರ್ತರು ಸದೃಢವಾಗಿದ್ದಾರೆ: ಈ ಕ್ಷೇತ್ರದಲ್ಲಿ ಕಾರ್ಯಕರ್ತರು ಸದೃಢವಾಗಿದ್ದಾರೆ. ಬಣಗಳ ಭಿನ್ನಾಭಿಪ್ರಾಯ ಬಿಟ್ಟು ಒಗ್ಗಟ್ಟಿನಿಂದ ದುಡಿದು ರಾಜ್ಯ ನಾಯಕರು ಘೋಷಿಸುವ ಅಭ್ಯರ್ಥಿಗೆ ಬೆಂಬಲಿಸಿದರೆ ಗೆಲುವು ಸಾಧ್ಯ ಎಂದರು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಆಲ್ದೂರು ಬ್ಲಾಕ್ ಅಧ್ಯಕ್ಷ ಜಿ.ಯು. ರಘು, ಕ್ಷೇತ್ರದಲ್ಲಿ ಕಾರ್ಯಕರ್ತರ ಉತ್ಸಾಹ ಕುಂದಿಲ್ಲ. ಕೆಲವು ಮುಖಂಡರ ವೈಯಕ್ತಿಕ ಪ್ರತಿಷ್ಠೆಗೆ ರಾಜ್ಯ ನಾಯಕರು ಕಿವಿಗೊಡುವುದನ್ನು ಬಿಟ್ಟು ಪಕ್ಷಕ್ಕೆ ಹಗಲಿರುಳು ದುಡಿದು ಪ್ರಾಮಾಣಿಕರಾಗಿ ಜನರೊಂದಿಗೆ ಪ್ರೀತಿ ವಿಶ್ವಾಸದಿಂದ ಇರುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಹೇಳಿದರು.
ಬ್ಲಾಕ್ ಮಹಾ ಪ್ರಧಾನ ಕಾರ್ಯದರ್ಶಿ ವಿ.ಪಿ. ರವಿ ಮಾತನಾಡಿದರು.
ಪುನರ್ ರಚನೆ ಮಾಡಿ: ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಜೆ. ಸುರೇಶ್ ಮಾತನಾಡಿ, ಬೂತ್ ಮಟ್ಟದಿಂದ ಎಲ್ಲಾ ಹೋಬಳಿ ಸಮಿತಿಗಳನ್ನು ಪುನಾರಚನೆ ಮಾಡಬೇಕು. ಇದರಿಂದ ಪಕ್ಷ ಸಂಘಟನೆ ಬಲವರ್ಧನೆಗೆ ಸಹಕಾರಿಯಾಗುತ್ತದೆ. ರಾಜ್ಯ ಮತ್ತು ಕೇಂದ್ರದಲ್ಲಿರುವ ಆಡಳಿತಾರೂಢ ಪಕ್ಷಗಳ ಭ್ರಷ್ಟಾಚಾರದ ಕೆಸರೆರಚಾಟದಲ್ಲಿ ಜನಸಾಮಾನ್ಯರ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಹೆಚ್.ಎನ್. ಕೃಷ್ಣೇಗೌಡ ಮಾತನಾಡಿ, ಅಭ್ಯರ್ಥಿಯ ಆಯ್ಕೆ ಮಾಡಬೇಕಾದರೆ, ಆರ್ಥಿಕ ಬಲ ಪ್ರದರ್ಶನವೊಂದೇ ಮಾನದಂಡವಾಗಬಾರದು. ಇದನ್ನು ಗಮನಿಸಿ ಸಾಮಾನ್ಯ ಜನರಿಗೆ ಸ್ಪಂದಿಸುವ ಅರ್ಹ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದರು.
ತಾಲೂಕು ಪಂಚಾಯಿತಿ ಸದಸ್ಯರಾದ ಈರಮ್ಮ, ಮಹೇಶ್, ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣಗೌಡ, ವಸ್ತಾರೆ ಹೋಬಳಿ ಅಧ್ಯಕ್ಷ ಕೆ.ಪಿ. ಸತೀಶ್ ಗೌಡ, ಅಂಬಳೆ ಹೋಬಳಿ ಅಧ್ಯಕ್ಷ ಪ್ರಸನ್ನ, ಜಾಕಿರ್ ಹುಸೇನ್ ಸೇರಿದಂತೆ ಪಕ್ಷದ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.