ನಿಗದಿಗಿಂತ ಅಧಿಕ ಹಣ ವಸೂಲಿ: ಆರೋಪ
ಮೂಡಿಗೆರೆ: ರಾಜ್ಯ ಸರಕಾರ ಇತ್ತೀಚೆಗೆ ಜಾರಿಗೊಳಿಸಿರುವ ಮನೆ ನಂಬರ್ ಪ್ಲೇಟ್ ಹಂಚಿಕೆ ಗುತ್ತಿಗೆ ಪಡೆದಿರುವ ಖಾಸಗಿ ಕಂಪೆನಿ ನೌಕರರು ನಿಗದಿಗಿಂತ ಅಧಿಕ ಹಣ ವಸೂಲಿ ನಡೆಸುತ್ತಿದ್ದಾರೆ ಹಾಗೂ ಈ ಪ್ಲೇಟ್ನಿಂದ ಯಾವುದೇ ಉಪಯೋಗವಾಗುತ್ತಿಲ್ಲ. ತಕ್ಷಣ ಇದನ್ನು ಹಿಂಪಡೆಯದಿದ್ದರೆ ಕಿರುಗುಂದ ಗ್ರಾಮ ಪಂಚಾಯಿತಿ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಿರುಗುಂದ ನಝೀರ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಮನೆ ನಂಬರುಗಳಿರುವ ಫಲಕವನ್ನು ಹಂಚಲು ತೆರಳುವ ಖಾಸಗಿ ನೌಕರರು ಸರಕಾರ ನಿಗದಿಪಡಿಸಿದ 20 ರು.ಗಳನ್ನು ಪಡೆಯುವ ಬದಲು 30ರಿಂದ 40 ರು.ಗಳವರೆಗೆ ಜನರಿಂದ ವಸೂಲಿ ಮಾಡುತ್ತಿದ್ದಾರೆ ಎಂದು ಅವರು ಇದೇ ಂಂದರ್ಭದಲ್ಲ್ಲ ಆರೋಪಿಸಿದರು. ಅಲ್ಲದೆ ಈ ನಂಬರ್ ಪ್ಲೇಟ್ನಲ್ಲಿ ಜಿಲ್ಲೆ, ತಾಲೂಕುಗಳ ಹೆಸರಿರುವ ಈ ಪ್ಲೇಟಿನಲ್ಲಿ ಆಯಾ ಗ್ರಾಮ ಪಂಚಾಯಿತಿಗಳ ಹೆಸರಾಗಲೀ, ಅಥವಾ ಆಯಾ ಊರಿನ ಹೆಸರಾಗಲಿ ಇರುವುದಿಲ್ಲ. ಕೂಡಲೇ ಸರ್ಕಾರದ ಹಣದಿಂದ ಸಮರ್ಪಕ ದಾಖಲೆಗಳಿರುವ ಫಲಕವನ್ನು ಜನರಿಗೆ ತಲುಪಿಸಲಿ. ಇಲ್ಲದಿದ್ದರೆ ಅನಿವಾರ್ಯವಾಗಿ ಮನೆ ಬಾಗಿಲಿಗೆ ಬರುವ ನೌಕರರಿಗೆ ದಿಗ್ಬಂಧನ ವಿಧಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.