ಅಂಗವಿಕಲ ಶಾಲೆಗೆ ನಿವೇಶನ
ಕಡೂರು: ವಿಕಲಚೇತನರ ವ್ಯಾಸಾಂಗಕ್ಕಾಗಿ ಪಟ್ಟಣದಲ್ಲಿ ಶಾಲೆ ತೆರೆಯಲು ಪುರಸಭೆಯಿಂದ ನಿವೇಶನ ಕೊಡಿಸುವುದಾಗಿ ಶಾಸಕ ಡಾ.ವೈ.ಸಿ. ವಿಶ್ವನಾಥ್ ಹೇಳಿದರು.
ಸಮಾರೋಪ: ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲೂಕು ಆಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ವಿಕಲ ಚೇತನರ ದಿನಾಚರಣೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಕಲತೆಯಿದೆ ಎಂದು ಮಕ್ಕಳ ಮನಸ್ಸಿಗೆ ಬಾರದಂತೆ ಅಂಗವಿಕಲರಲ್ಲಿ ಸ್ಪೂರ್ತಿ ಮೂಡಿಸಿದಲ್ಲಿ ವಿಕಲಚೇತನರು ಸಾಧನೆ ಮಾಡಬಲ್ಲರು.
ಪೋಷಕರು ವಿಕಲಾಂಗ ಮಗು ಹುಟ್ಟಿದರೆ ಆ ಮಗುವಿನ ಬಗ್ಗೆ ಪಾಲಕರೇ ಹೆಚ್ಚಾಗಿ ನಿರ್ಲಕ್ಷ್ಯ ವಹಿಸುವ ಇಂದಿನ ದಿನಗಳಲ್ಲಿ ಅಂತಹ ಮಕ್ಕಳಿಗೆ ಮುಖ್ಯವಾಗಿ ಬೇಕಾಗಿರುವುದು ಪೋಷಕರಿಂದ ಆತ್ಮಸ್ಥೈರ್ಯ ತುಂಬುವುದು ಮತ್ತು ಇತರೆ ಅಂಗವಿಕಲರ ಸಾಧನೆಗಳನ್ನು ಮನನ ಮಾಡಿದಲ್ಲಿ ಆ ಮಗು ಸಾಧನೆ ಮಾಡಿ ತೋರಸಿ ಸಮಾಜಕ್ಕೆ ಮಾದರಿಯಾಗಬಲ್ಲದು ಎಂದರು.
ನಿವೇಶನ: ಇದಕ್ಕೆ ಪೋಷಕರು ಹಾಗೂ ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕಿದೆ.
ತಮಗೆ ನೀಡುವ ಸರ್ಕಾರಿ ಅನುದಾನದಲ್ಲಿ ಪ್ರತಿ ವರ್ಷ 10ಲಕ್ಷ ರು.ಗಳನ್ನು ಅಂಗವಿಕಲರ ಕಲ್ಯಾಣ ನಿಧಿಗೆ ನೀಡಲಾಗುತ್ತಿದೆ. ಪಟ್ಟಣದಲ್ಲಿ ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಯುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ.
ಆ ನಿಟ್ಟಿನಲ್ಲಿ ತಾವು ಪುರಸಭೆಯಿಂದ ಶಾಲೆ ನಿರ್ಮಾಣಕ್ಕಾಗಿ ನಿವೇಶನ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ದಾನಿ ಎಚ್. ಉಮೇಶ್ ವಿಕಲಚೇತನರಿಗಾಗಿ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿ, ಮಕ್ಕಳು ಹಾಗೂ ಪೋಷಕರು ಅಂಗವಿಕಲತೆಯನ್ನು ಶಾಪ ಎಂದು ತಿಳಿಯದೆ ಅಂಗವಿಕಲತೆಯನ್ನು ಮೆಟ್ಟಿನಿಲ್ಲುವ ದೃಢ ಮನೋಭಾವ ಹೊಂದಿ ಆತ್ಮವಿಶ್ವಾಸ ಹೊಂದಿದಲ್ಲಿ ಸಾಮಾನ್ಯ ಜನರು ಮಾಡುವ ಸಾಧನೆ ಮಾಡಿದಲ್ಲಿ ಕೀಳರಿಮೆಯನ್ನು ಹೋಗಲಾಡಿಸಲು ಸಾದ್ಯ. ವಿಕಲಚೇತನರ ಇಂತಹ ಕಾರ್ಯಕ್ರಮಕ್ಕೆ ತಾವು ಮುಂದೆಯೂ ಎಲ್ಲ ರೀತಿಯಿಂದಲೂ ಸಹಕಾರ ನೀಡುವುದಾಗಿ ಹೇಳಿದರು.
ಕಾರ್ಯಕ್ರಮ ಉಧ್ಘಾಟಿಸಿದ ಜಿಪ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಅಂಗವಿಕಲರು ರಾಜ್ಯ, ರಾಷ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಮಾನ್ಯರಂತೆ ಸಾಧನೆ ಮಾಡಿರುವುದು ನಮ್ಮ ಕಣ್ಣ ಮಂದಿದ್ದು, ಸಾಧನೆಗೆ ಅಂಗವೈಕ್ಯಲ ಅಡ್ಡಿಯಲ್ಲ ಎಂಬುದನ್ನು ತಿಳಿದು ಸಾಧಿಸಲು ಹೊರಟರೆ ಸಾಧನೆ ಸಿದ್ದಿಯಾಗುತ್ತದೆ ಇದರಲ್ಲಿ ಶಿಕ್ಷಕರು ಹೆಚ್ಚಿನ ಜವಬ್ದಾರಿ ಹೊರಬೇಕಿದೆ ಎಂದರು.
ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಗೋಪಾಲಕೃಷ್ಣ ಅಂಗವಿಕಲರಿಗೆ ಸರ್ಕಾರದಿಂದ ದೊರಕುವ ಸವಲತ್ತುಗಳ ಕುರಿತು ಮಾತನಾಡಿ, ಅಂಗವಿಕಲರ ಸಾಧನೆಗೆ ಸರ್ಕಾರವು ಎಲ್ಲ ರೀತಿಯ ಸವಲತ್ತುಗಳನ್ನು ಒದಗಿಸಿಕೊಡುತ್ತಿದೆ ಎಂದು ಹೇಳಿದರು.
ಸಮಾರಂಭದಲ್ಲಿ ತಾಪ ಅಧ್ಯಕ್ಷ ಓಂಕಾರಮೂರ್ತಿ,ಪುರಸಭೆ ಆಧ್ಯಕ್ಷೆ ಭಾರತಿ ಮಹಾಲಿಂಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಓಂಕಾರಪ್ಪ, ಕೆ.ಜಿ.ಶ್ರೀನಿವಾಸಮೂರ್ತಿ, ಕೆ.ಎಚ್.ಎ. ಪ್ರಸನ್ನ, ಶೋಭಾ, ತಾಲೂಕು ವಿವಿದೋದ್ದೇಶ ಕಾರ್ಯಕರ್ತೆ ಷಹನಾವಾಜ್ ಅವರು ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.