ಜನಪದ ಕಲಾವಿದರಿಗೆ ಹೆಚ್ಚಿನ ಸೌಲಭ್ಯವಿಲ್ಲ
ಹರಪನಹಳ್ಳಿ: ಜನಪದ ಕಲಾವಿದರಿಗೆ ಉತ್ತಮ ಸೌಲಭ್ಯ ದೊರಕುತ್ತಿಲ್ಲ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕುಂ. ವೀರಭದ್ರಪ್ಪ ವಿಷಾದಿಸಿದ್ದಾರೆ.
ಪಟ್ಟಣದ ಎಡಿಬಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಜನಪದ ಅಕಾಡೆಮಿ ಹಾಗೂ ಅಂಬ್ಲಿ ದೊಡ್ಡ ಭರಮಪ್ಪ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಜನಪದ ವಿದ್ವಾಂಸ ದಿ. ಮುದೇನೂರು ಸಂಗಣ್ಣನವರ ನೆನಪು ವಿಚಾರ ಸಂಕಿರಣ ಹಾಗೂ ಹರಪನಹಳ್ಳಿ ತಾಲೂಕು ಜನಪದ ಕಲಾಮೇಳದಲ್ಲಿ ಮಾತನಾಡಿದರು.
ಉತ್ತಮ ಸೌಲಭ್ಯ: ನಮ್ಮಂತವರು ಕಾರ್ಯಕ್ರಮಗಳಿಗೆ ಹೋದರೆ ಉತ್ತಮ ಟಿಎ ಹಾಗೂ ಡಿಎ ಕೊಡಲಾಗುತ್ತೆ. ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಜನಪದ ಕಲಾವಿದರಿಗೆ ಅಂತಹ ಸೌಲಭ್ಯ ಸಿಗುತ್ತಿಲ್ಲ. ಅವರಿಗೂ ನಮ್ಮಂತೆ ಉತ್ತಮ ಸೌಲಭ್ಯ ದೊರಕಬೇಕು, ಈ ನಿಟ್ಟಿನಲ್ಲಿ ಕಲಾವಿದರು ಹಾಗೂ ಸರ್ಕಾರದ ಮಧ್ಯೆ ಜನಪದ ಅಕಾಡೆಮಿ ಕೊಂಡಿಯಾಗಿ ಕೆಲಸ ಮಾಡಿ ಹೆಚ್ಚಿನ ಸೌಲಭ್ಯ ದೊರಕಿಸಿಕೊಡಬೇಕು ಎಂದು ಅವರು ಸಲಹೆ ನೀಡಿದರು.
ಜಾನಪದ ತಜ್ಞರು: ಜನಪದ ವಿದ್ವಾಂಸ ದಿ. ಮುದೇನೂರು ಸಂಗಣ್ಣನವರು ಅಪ್ಪಟ ದೇಶಿತನದ ವ್ಯಕ್ತಿತ್ವ, ಸರಳ, ಸಜ್ಜನಿಕೆ ಅವರಿಂದ ನಾವು ಕಲಿತೆವು, ಜಾನಪದ ಅನ್ನುವುದು ಅವರ ವ್ಯಕಿತ್ವದ ಭಾಗವಾಗಿತ್ತು ಎಂದು ಕುಂವೀ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರಂಭ ಉದ್ಘಾಟಿಸಿದ ಸಾಹಿತಿ ಡಾ. ಬಸವರಾಜ ಮಲಶೆಟ್ಟಿ ಅವರು, ಮುದೇನೂರು ಸಂಗಣ್ಣ ನಾಟಕಕಾರ, ಕವಿ, ಚಿಂತಕರು, ಅನುವಾದಕರು, ಜಾನಪದ ತಜ್ಞರು ಎಲ್ಲವೂ ಆಗಿದ್ದರು, ಮನುಷ್ಯ ಬೆಳೆದಂತೆಲ್ಲಾ ಮಾನಸಿಕವಾಗಿ ಕುಬ್ಜನಾಗುತ್ತಾನೆ, ಆದರೆ ಸಂಗಣ್ಣ ಪರಿಪೂರ್ಣ ಪ್ರೊಪೇಷರ್. ರಾಜಕೀಯ ಅವರಿಗೆ ಬೇಸರ ತರಿಸಿ ಕೊನೆಗೆ ಚುನಾವಣೆಯಲ್ಲಿ ಮತ ಚಲಾಯಿಸುವುದನ್ನೆ ಬಿಟ್ಟಿದ್ದರು ಎಂದರು.
ನಾಡೋಜ ಬೆಳಗಲ್ಲು ವೀರಣ್ಣ ರಾಮಾಯಣದ ದೃಶ್ಯವನ್ನು ತೊಗಲು ಗೊಂಬೆ ಆಟಕ್ಕೆ ಅಳವಡಿಸಿರವುದರ ಬಗ್ಗೆ ವಿವರಿಸಿ, ಜಾನಪದದ ಮೂಲತತ್ವ ಹಾಡಿದರೆ ಮಾತನಾಡಿದಂತೆ, ಮಾತನಾಡಿದರೆ ಹಾಡಿದಂತೆ ಇರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜನಪದ ಅಕಾಡಮಿ ಅಧ್ಯಕ್ಷ ಬಾನಂದೂರು ಕೆಂಪಯ್ಯ, ಮಾನವೀಯ ಮೌಲ್ಯಗಳನ್ನು ನಮಗೆ ಸಂಗಣ್ಣನವರು ತಿಳಿಸಿ ಕೊಟ್ಟಿದ್ದಾರೆ.
ಕಲಾವಿದರ ಬದುಕು ಇಂದು ತುಂಬಾ ಕಷ್ಟದಾಯಕವಾಗಿದೆ, ಅವರ ಆರ್ಥಿಕ ಮಟ್ಟ ಸಸುಧಾರಿಸಬೇಕಾಗಿದೆ, ಇನ್ನು ಮುಂದೆ ಸಂಭಾವನೆಯನ್ನು ನೇರವಾಗಿ ಕಲಾವಿದರ ಕೈಯಲ್ಲಿಯೇ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.
ಜನಪದ ವಿದ್ವಾಂಸ ದಿ.ಮುದೇನೂರು ಸಂಗಣ್ಣ ನವರ ಪುತ್ರ ಮುದೇನೂರು ಅಶೋಕ ಅವರಿಗೆ ಸನ್ಮಾನಿಸಲಾಯಿತು. ಸಂಶೋಧಕ ಕುಂ.ಬಾ. ಸದಾಶಿವಪ್ಪ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಐಗೋಳ ಚಿದಾನಂದ, ಪ್ರಾಚಾರ್ಯ ಎಸ್. ನಾಗೇಂದ್ರ, ಜನಪದ ಅಕಾಡೆಮಿ ರಿಜಿಸ್ಟ್ರಾರ್ ಬಿ.ಎನ್. ಪರೆಡ್ಡಿ, ಕಾರ್ಯಕ್ರಮದ ಸಂಚಾಲಕ ಡಾ.ಕೆ. ರುದ್ರಪ್ಪ, ಡಾ.ಎಂ.ಜಿ. ಈಶ್ವರಪ್ಪ, ಪ್ರೊ.ಬಿ.ವಿ. ವೀರಭದ್ರಪ್ಪ, ಸಿ. ಚೆನ್ನಬಸವಣ್ಣ, ಡಾ.ಬಸವರಾಜ ನೆಲ್ಲಿಸರ, ಎಂ.ಎಂ. ಶಿವಪ್ರಕಾಶ ಉಪಸ್ಥಿತರಿದ್ದರು.