ಕಂದಾಯ ನಿರೀಕ್ಷಕರಿಂದ ದಲಿತ ವಿರೋಧಿ ನೀತಿ
ಕ.ಪ್ರ.ವಾರ್ತೆ ಕಡೂರು ಜು.1 ಇಲ್ಲಿನ ಕಸಬಾ ಹೋಬಳಿಯ ಕಂದಾಯ ನಿರೀಕ್ಷಕರು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ದಸಂಸ ತಾಲೂಕು ಸಂಚಾಲಕ ಶೂದ್ರ ಶ್ರೀನಿವಾಸ್ ಆರೋಪಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ, ಶಾಸಕ ವೈ.ಎಸ್.ವಿ. ದತ್ತ ಮತ್ತು ತಹಸೀಲ್ದಾರರಿಗೆ ದೂರು ಸಲ್ಲಿಸಿ ಪತ್ರಿಕಾ ಹೇಳಿಕೆ ನೀಡಿರುವ ಶ್ರೀನಿವಾಸ್, ಕಡೂರು ತಾಲೂಕು ಕಚೇರಿಯಲ್ಲಿ ನೆಮ್ಮದಿ ಕೇಂದ್ರವಿದ್ದು, ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ಪ್ರತಿನಿತ್ಯ ನೂರಾರು ಜನರು ಸರತಿ ಸಾಲಿನಲ್ಲಿ ನಿಂತುಕೊಳ್ಳುತ್ತಾರೆ ಆದರೆ ಸಾರ್ವಜನಿಕರಿಗೆ ಸುರಕ್ಷತೆ ಇಲ್ಲ ಎಂದು ಆರೋಪಿಸಿದರು.
ಚಾವಣಿ ಅವಶ್ಯಕ: ಮಳೆ ಬಂದರೆ, ಬಿಸಿಲು ಇದ್ದರೆ ಬಿಸಿಲು ಹಾಗೂ ಮಳೆಯಲ್ಲಿಯೇ ಗಂಟೆಗಟ್ಟಲೆ ನಿಲ್ಲುವಂತಾಗಿದೆ.
ಕೇಂದ್ರದ ಮುಂದೆ ಚಾವಣಿ ನಿರ್ಮಾಣದ ಅವಶ್ಯಕತೆಯಿದೆ. ಅದೇ ರೀತಿ ಈ ಕಚೇರಿ ಆವರಣದಲ್ಲಿ ಹಲವಾರು ಸಮಸ್ಯೆ ಇದ್ದು, ಸಾರ್ವಜನಿಕರಿಗೆ ಶೌಚಾಲಯದ ಅವಶ್ಯಕತೆ ಇದೆ. ಶೌಚಾಲಯವಿಲ್ಲದೆ ದೂರದ ಊರುಗಳಿಂದ ಬರುವ ಮಹಿಳೆಯರಿಗೆ ತುಂಬಾ ತೊಂದರೆ ಉಂಟಾಗುತ್ತಿದ್ದು, ಈ ಬಗ್ಗೆಯೂ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಡೂರು ಕಸಬಾ ಹೋಬಳಿ ಕಂದಾಯ ನಿರೀಕ್ಷಕ ಸತ್ಯನಾರಾಯಣರ ಅವರು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಅದರಲ್ಲೂ ಮಖ್ಯವಾಗಿ ಮಾದಿಗ (ಆದಿಕರ್ನಾಟಕ)ಜನಾಂಗದವರು ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದಾಗ ಉದ್ದೇಶ ಪೂರ್ವಕವಾಗಿ ಅವರ ಅರ್ಜಿಯನ್ನು ವಜಾ ಮಾಡುವುದು.
ಸತಾಯಿಸುವುದು ಹಾಗೂ ಅನಗತ್ಯ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಬಾಡಿಗೆ ಮನೆ ವಾಸ: ದಲಿತರ ಜಮೀನಿನ ಕೆಲಸದ ವಿಚಾರದಲ್ಲಿ ಉದ್ದೇಶಪೂರ್ವಕವಾಗಿ ತೊಂದರೆ ನೀಡುತ್ತಿರುವುದು ದಸಂಸ ಗಮನಕ್ಕೆ ಬಂದಿದೆ. ಕಂದಾಯಾಧಿಕಾರಿಗೆ ವಾಸಿಸಲು ಕಡೂರಿನಲ್ಲಿ ಕ್ವಾಟ್ರಸ್ ಇದ್ದರೂ, ಬಾಡಿಗೆ ಮನೆಯಲ್ಲೇ ವಾಸ ಮಾಡುತ್ತಿದ್ದು, ಸರ್ಕಾರದಿಂದ ಬಾಡಿಗೆ ಪಡೆಯುತ್ತಿದ್ದಾರೆ.
ತಮ್ಮ ಜನಾಂಗದವರಿಗೆ ಮಾತ್ರ ಕಡಿಮೆ ಆದಾಯ ಬರೆದು ಕೊಟ್ಟ ದಲಿತ ವಿದ್ಯಾರ್ಥಿಗಳಿಗೆ ಹೆಚ್ಚು ಆದಾಯ ಬರೆದು ಕೊಡುತ್ತಿದ್ದಾರೆ ಎಂದು ಆರೋಪಿಸಿರುವ ಶ್ರೀನಿವಾಸ್, ಕೂಡಲೇ ಶಾಸಕ ದತ್ತ, ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರರು ಸಮಸ್ಯೆ ಬಗ್ಗೆ ಮತ್ತು ಕಂದಾಯಾಧಿಕಾರಿ ವರ್ತನೆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇಲ್ಲದೇ ಹೋದಲ್ಲಿ ತಾಲೂಕು ಕಚೇರಿ ಮುಂದೆ ಅನಿರ್ದಿಷ್ಟ ಕಾಲ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.