ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಶಾಲಾ ಕಾಮಗಾರಿ: ವಿವರ ನೀಡಿ

Lingaraj Badiger
Updated On : 2 Jul 2013, 10:41 am

ಕ.ಪ್ರ.ವಾರ್ತೆ  ಬಾಳೆಹೊನ್ನೂರು  ಜು.1
ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳ ಅನುದಾನದಿಂದ ಶಾಲೆಗಳಲ್ಲಿ ಕೈಗೊಳ್ಳುವ ಎಲ್ಲಾ ಕಾಮಗಾರಿಗಳ ಪೂರ್ಣ ವಿವರವನ್ನು ಆಯಾ ಶಾಲೆಗಳ ಶಾಲಾಭಿವೃದ್ಧಿ ಸಮಿತಿಗೆ ನೀಡುವಂತೆ ಜಿ.ಪಂ. ಸದಸ್ಯ ಕೆ.ಎಸ್. ರವೀಂದ್ರ ಕುಕ್ಕುಡಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಲ್ಲಿಗೆ ಸಮೀಪದ ಜಯಪುರ ಗ್ರಾ.ಪಂ.ಸಭಾಂಗಣದಲ್ಲಿ ಮೇಗುಂದಾ ಹೋಬಳಿ ಮಟ್ಟದ ಸರ್ಕಾರಿ ಮತ್ತು ಅನುದಾನಿತ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು, ಮುಖ್ಯೋಪಾಧ್ಯಾಯರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಆಯೋಜಿಸಿದ್ದ ಶೈಕ್ಷಣಿಕ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್‌ಡಿಎಂಸಿ ದೃಢೀಕರಣ ಅಗತ್ಯ: ಇಂಜಿನಿಯರ್ ಮತ್ತು ಗುತ್ತಿಗೆದಾರರ ಹಿತಕ್ಕಾಗಿ ಕಾಮಗಾರಿ ನಡೆಸುವುದು ಬೇಡ. ಶಾಲೆಗಳಲ್ಲಿ ನಡೆಯುವ ಕಾಮಗಾರಿ ಕುರಿತು ಅಲ್ಲಿನ ಎಸ್‌ಡಿಎಂಸಿಗೆ ಸಂಪೂರ್ಣ ಅರಿವಿರಬೇಕು
 ಕಾಮಗಾರಿ ಪೂರ್ಣಗೊಂಡ ಬಗ್ಗೆ ಸಂಬಂಧಪಟ್ಟ ಎಸ್‌ಡಿಎಂಸಿ ದೃಢೀಕರಣ ನೀಡಿದ ನಂತರ ಮಾತ್ರ ಪೂರ್ಣ ಬಿಲ್ ಪಾವತಿಸುವ ವ್ಯವಸ್ಥೆ ಆಗಬೇಕು ಎಂದು ತಿಳಿಸಿದರು.
ಕಳಪೆಯಾಗಿದಲ್ಲಿ ಸೂಕ್ತ ಕ್ರಮ: ಶಾಲೆಗಳಲ್ಲಿ ಗಂಭೀರ ಸಮಸ್ಯೆಗಳ ಕುರಿತು ಅರಿಯುವ ಪ್ರಯತ್ನ ಇದಾಗಿದ್ದು, ಶಿಕ್ಷಕರ ಕೆಲವು ನಡತೆಯಿಂದ ಇಡೀ ಶಿಕ್ಷಕ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ.
 ಹೀಗೆ ದಾರಿ ತಪ್ಪಿದ ಶಿಕ್ಷಕರನ್ನು ತಿದ್ದುವ ಹೊಣೆ ಶಿಕ್ಷಕರ ಸಂಘದಾಗಿದೆ. ಸರ್ಕಾರಿ ಶಾಲೆಗಳಲ್ಲಿ ನಡೆಯುವ ಸಭೆಗೆ ಪೋಷಕರು ಯಾಕೆ ಬರುತ್ತಿಲ್ಲ ಎಂಬುದು ಅರ್ಥವಾಗದಾಗಿದೆ. ಸರ್ಕಾರ ಇಷ್ಟೆಲ್ಲಾ ಸವಲತ್ತುಗಳನ್ನೂ ನೀಡಿಯೂ ಸಾಧನೆ ಕಳಪೆಯಾಗಿದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
80 ಶಾಲೆಗಳ ಶೌಚಾಲಯ ಕಳಪೆ: ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್. ಪ್ರಕಾಶ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಕಡಿಮೆಯಾಗುವ ಅಪಾಯ ಎದುರಾಗಿದೆ. ಎಲ್ಲರ ಸಹಕಾರದಿಂದ ಹೆಚ್ಚಿನ ಗುಣಮಟ್ಟ ಕಾಯ್ದುಕೊಳ್ಳಲು ಇಂತಹ ಸಂವಾದ ಅಗತ್ಯ.
ಇಂಗ್ಲೀಷ್ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಳ ಸೇರ್ಪಡೆಗೆ ಹಿನ್ನಡೆಯಾಗಿದೆ. ಇತ್ತೀಚೆಗೆ ಶಾಲೆಗಳಲ್ಲಿನ ಶೌಚಾಲಯ ನೈರ್ಮಲ್ಯ ಕುರಿತು ನಡೆಸಿದ ಸಮೀಕ್ಷೆಯಲ್ಲಿ ತಾಲೂಕಿನ 123 ಶಾಲೆಗಳಲ್ಲಿ 80 ಶಾಲೆಗಳ ಶೌಚಾಲಯ ಕಳಪೆಯಾಗಿದೆ ಎಂಬ ವರದಿ ಬಂದಿದೆ.
ಇದು ಆತಂಕಕಾರಿ ವಿಷಯವಾಗಿದ್ದು, ಗುಣಮಟ್ಟ ಹೆಚ್ಚಿಸುವ ಬಗ್ಗೆ ಶಿಕ್ಷಕರು ಗಮನ ಹರಿಸಬೇಕಾದ ಅಗತ್ಯ ಹೆಚ್ಚಿದೆ ಎಂದರು.
ಕೊಪ್ಪ ತಾ.ಪಂ. ಅಧ್ಯಕ್ಷೆ ಪದ್ಮಾವತಿ ರಮೇಶ್, ಜಯಪುರ ಗ್ರಾ.ಪಂ. ಅಧ್ಯಕ್ಷೆ ಕವಿತಾ ಶ್ರೀನಿವಾಸ್, ತಾ.ಪಂ. ಸದಸ್ಯರಾದ ಸುಜಾತ, ಬೆಚಿಡೆಹಕ್ಲು ನಾರಾಯಣ್, ರಮೇಶ್, ಓಂಕಾರಪ್ಪ, ಸ್ನೇಹಾ, ಶಿವಶಂಕರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement