ಎಸ್‌ಬಿಎಂನಿಂದ ಶಾಲೆಗೆ ಫ್ಯಾನ್ ವಿತರಣೆ
ಕ.ಪ್ರ.ವಾರ್ತೆ, ಕಡೂರು, ಜು.2
ಬ್ಯಾಂಕಿಂಗ್ ಸೇವೆ ಜೊತೆ ಸಾರ್ವಜನಿಕ ಕ್ಷೇತ್ರದಲ್ಲಿಯೂ ಸೇವೆ ಮಾಡುವ ಉದ್ದೇಶ ಹೊಂದಿರುವ ಎಸ್‌ಬಿಎಂ ವಿಭಾಗವು ಸಾಮಾಜಿಕ ಸೇವೆಗೆ ತೊಡಗಿಸಿಕೊಂಡಿದೆ ಎಂದು ಕಡೂರು ಶಾಖೆ ವ್ಯವಸ್ಥಾಪಕ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಛತ್ರ ಬೀದಿಯ ವಿಶ್ವಭಾರತಿ ಶಾಲೆ ಆವರಣದಲ್ಲಿರುವ ದ್ರುವತಾರೆ ಪ್ರೌಢಶಾಲೆಗೆ ಎಸ್‌ಬಿಎಂನಿಂದ ಫ್ಯಾನುಗಳನ್ನು ವಿತರಿಸಿ ಮಾತನಾಡಿ, ಬ್ಯಾಂಕ್ ಸೇವೆ ಜೊತೆ ಸಮಾಜಕ್ಕೆ ಉಪಯೋಗವಾಗುವ ಕಾರ್ಯಗಳನ್ನು ಹಲವಾರು ವರ್ಷಗಳಿಂದ ಮಾಡುತ್ತಾ ಬರಲಾಗಿದೆ ಎಂದು ಹೇಳಿದರು.
ಕಳೆದ ಬಾರಿ ವಾಟರ್ ಫಿಲ್ಟರ್ ಸೇರಿದಂತೆ ವಿವಿಧ ರೀತಿಯ ಉಪಯೋಗಿ ವಸ್ತುಗಳ ವಿತರಣೆಯನ್ನು ರಾಜ್ಯಾದ್ಯಂತ ಮಾಡಲಾಗಿತ್ತು. ಉತ್ತಮ ಫಲಿತಾಂಶ ಬರಲು ಶಿಕ್ಷಕರು ಮತ್ತು ಮಕ್ಕಳು ಪರಿಶ್ರಮ ಪಡಬೇಕು ಎಂದು ತಿಳಿಸಿದರು.
ಸಂತಸದ ಸಂಗತಿ: ಶಾಲೆಯ ಮುಖ್ಯ ಶಿಕ್ಷಕರಾದ ಟಿ.ಆರ್. ಲಕ್ಕಪ್ಪ ಮಾತನಾಡಿ, ಕಳೆದ 25 ವರ್ಷದಿಂದ ದ್ರುವತಾರೆ ಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಾ ಬಂದಿದೆ. ಇದೀಗ ಶಾಲೆಯ ಉತ್ತಮ ಫಲಿತಾಂಶ ಮನಗಂಡು ತಾಲೂಕಿನಲ್ಲಿ ಆಯ್ಕೆ ಮಾಡಿ ವಿತರಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ರಾಜೀವ್ ಕುಮಾರ್, ಸಿಬ್ಬಂದಿ ಲೋಕೇಶ್, ಶಾಲೆಯ ಸಿಬ್ಬಂದಿಗಳಾದ ಹಾಲ ಸಿದ್ದಪ್ಪ, ಮೋಹನಕುಮಾರ್, ರಾಜಣ್ಣ, ವೇದಾವತಿ, ವೃಷಭೇಂದ್ರಯ್ಯ, ಕೆಂಚಪ್ಪ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.