ಬಿಜೆಪಿ ನಗರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬಿರುಸಿನ ಪೈಪೋಟಿ
ಕಡೂರು: ಪಕ್ಷದ ನಿಯಮಾವಳಿಯಂತೆ ಬಿಜೆಪಿ ಪದಾಧಿಕಾರಿಗಳ ಬದಲಾವಣೆಗೆ ಜಿಲ್ಲಾ ಮುಖಂಡರು ಕಡೂರಿಗೆ ಭೇಟಿ ನೀಡಿ ಮಾತುಕತೆ ನಡೆಸಿರುವ ಬೆನ್ನಲ್ಲೆ ಕಡೂರು ನಗರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬಿರುಸಿನ ಪೈಪೋಟಿ ಆರಂಭಗೊಂಡಿದೆ.
ಕೆ.ಎಸ್. ಸೋಮಪ್ರಸಾದ್ ಹಾಲಿ ನಗರ ಘಟಕದ ಅಧ್ಯಕ್ಷರಾಗಿದ್ದು, ಇದೀಗ ಪಕ್ಷದ ನಿಯಮದಂತೆ ಮೂರು ವರ್ಷಗಳಿಗೊಮ್ಮೆ ಪದಾಧಿಕಾರಿಗಳ ಬದಲಾವಣೆಗೆ ಸಂಭಂದಿಸಿ ನಗರ ಘಟಕದ ಅಧ್ಯಕ್ಷ ಸ್ಥಾನಕ್ಕಾಗಿ ತಾಲೂಕು ಘಟಕದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎ. ಮಣಿ, ಗೋಪಿಕುಮಾರ್, ಪೆಟ್ರೋಲ್ ಬಂಕ್ ಮಂಜುನಾಥ್, ಪ್ರಕಾಶ್ ಮತ್ತು ರವಿಶಂಕರ್ ನಡುವೆ ಲಾಭಿ ಆರಂಭಗೊಂಡಿದೆ. ಪಕ್ಷದ ತಾಲೂಕು ಘಟಕದ ನೂತನ ಅಧ್ಯಕ್ಷರ ಆಯ್ಕೆ ನಂತರ ನೂತನ ಅಧ್ಯಕ್ಷರು, ಎಂಟು ಶಕ್ತಿ ಕೇಂದ್ರಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಮುಖಂಡರು ಪಕ್ಷಕ್ಕಾಗಿ ಸಕ್ರಿಯವಾಗಿ ದುಡಿದಿರುವುದನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗಿದ್ದರೂ ಆಕಾಂಕ್ಷಿಗಳು ಲಾಭಿ ಆರಂಭಿಸಿದ್ದಾರೆ. ನೂತನ ತಾಲೂಕು ಅಧ್ಯಕ್ಷರ ಆಯ್ಕೆ ನಂತರ ಮಾಜಿ ಶಾಸಕ ಡಾ.ವೈ.ಸಿ. ವಿಶ್ವನಾಥ್, ಬೀರೂರು ದೇವರಾಜ್, ಶಕ್ತಿ ಕೇಂದ್ರಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಿರಿಯ ಮುಖಂಡರು ಸೇರಿ ನಗರ ಘಟಕದ ಅಧ್ಯಕ್ಷರ ಆಯ್ಕೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.