ರಾಜ್ಯ ಹೆದ್ದಾರಿ ಮೇಲ್ದರ್ಜೆ ಏರಿಕೆಗೆ ಪ್ರಸ್ತಾವನೆ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜು.2
ಜಿಲ್ಲೆಯಲ್ಲಿರುವ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸಿ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳೊಂದಿಗೆ ಸಂಪರ್ಕ ಕಲ್ಪಿಸುವ ಕುರಿತು ಕೇಂದ್ರದ ಭೂ ಸಾರಿಗೆ ಸಚಿವರಾದ ಆಸ್ಕರ್ ಫರ್ನಾಂಡೀಸ್ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಎನ್. ಮಹೇಶ್ ಹೇಳಿದ್ದಾರೆ.
ಈ ಸಂಬಂಧ ಸಚಿವರೊಂದಿಗೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಜಯಪ್ರಕಾಶ್ ಹೆಗ್ಡೆ ಅವರು ಚರ್ಚಿಸಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೇಲೂರು- ಚಿಕ್ಕಮಗಳೂರು- ತರೀಕೆರೆ: ಬೇಲೂರು- ಚಿಕ್ಕಮಗಳೂರು- ತರೀಕೆರೆ ರಾಜ್ಯ ಹೆದ್ದಾರಿ (ಬಾಗಲಕೋಟೆ- ಬಿಳಿಗಿರಿರಂಗನಬೆಟ್ಟ ರಸ್ತೆ)ಯನ್ನು ರಾಷ್ಟ್ರೀಯ ಹೆದ್ದಾರಿ 234 ರಿಂದ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಸಂಪರ್ಕಿಸಿ ಮೇಲ್ದರ್ಜೆಗೆ ಏರಿಸುವುದು. ಈ ಮಾರ್ಗವು ಬೇಲೂರು, ಮಾಗಡಿ ಕೈಮರ, ಕರ್ತಿಕೆರೆ, ಹಿರೇಮಗಳೂರು, ಚಿಕ್ಕಮಗಳೂರು, ಕೈಮರ, ಹೊಸಪೇಟೆ, ಸಂತವೇರಿ, ಲಿಂಗದಹಳ್ಳಿ, ಲಕ್ಕವಳ್ಳಿ ಮತ್ತು ತರೀಕೆರೆ ಈ ಊರುಗಳ ಮೂಲಕ ಹಾದುಹೋಗಲಿದೆ.
ಕಡೂರು- ಮೂಡಿಗೆರೆ ರಾಜ್ಯ ಹೆದ್ದಾರಿ (ಕಡೂರು- ಕಾಯನ್ ಗಾಡ್ ರಸ್ತೆ)ಯನ್ನು ಕಡೂರು ರಾಷ್ಟ್ರೀಯ ಹೆದ್ದಾರಿ 206 ರಿಂದ ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ 234ಕ್ಕೆ ಸಂಪರ್ಕಿಸಿ ಮೇಲ್ದರ್ಜೆಗೆ ಏರಿಸುವುದು. ಈ ಮಾರ್ಗವು ಕಡೂರು, ಸಖರಾಯಪಟ್ಟಣ, ಚಿಕ್ಕಮಗಳೂರು, ಮತ್ತು ಮೂಡಿಗೆರೆ ಈ ಊರುಗಳ ಮೂಲಕ ಹಾದುಹೋಗಲಿದೆ ಎಂದು ಅವರು ಹೇಳಿದರು.
ರಾ.ಹೆ. 13ಕ್ಕೆ ಸಂಪರ್ಕ: ಮೂಡಿಗೆರೆ- ಚಿಕ್ಕಮಗಳೂರು- ಶೃಂಗೇರಿ- ನರಸಿಂಹರಾಜಪುರ- ಕೊಪ್ಪ- ಶೃಂಗೇರಿ (ವಿರಾಜಪೇಟೆ- ಬೈಂದೂರು ರಸ್ತೆ) ರಾಜ್ಯ ಹೆದ್ದಾರಿ 27ನ್ನು ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ 234 ರಿಂದ ಶೃಂಗೇರಿ ರಾಷ್ಟ್ರೀಯ ಹೆದ್ದಾರಿ 13ಕ್ಕೆ ಸಂಪರ್ಕಿಸಿ ಮೇಲ್ದರ್ಜೆಗೆ ಏರಿಸುವುದು. ಈ ಮಾರ್ಗವು ಚೀಕನಹಳ್ಳಿ, ಕನ್ನಾಪುರ, ಮೂಡಿಗೆರೆ, ಹಾಂದಿ, ಆಲ್ದೂರು, ಕಣತಿ, ಖಾಂಡ್ಯ, ಬಾಳೆಹೊನ್ನೂರು, ಹೆರೂರು, ಜಯಪುರ, ಶೃಂಗೇರಿ ಮತ್ತು ಬೇಗಾರು, ಆಗುಂಬೆ, ಸೋಮೆಶ್ವರ ಮತ್ತು ಬೈಂದೂರು ಈ ಊರುಗಳ ಮೂಲಕ ಹಾದುಹೋಗಲಿದೆ.
ಕಡೂರು- ಹೊಳಲ್ಕೆರೆ ರಾಜ್ಯ ಹೆದ್ದಾರಿ 153 ವನ್ನು ಕಡೂರು ರಾಷ್ಟ್ರೀಯ ಹೆದ್ದಾರಿ 206 ರಿಂದ ಹೊಳಲ್ಕೆರೆ ರಾಷ್ಟ್ರೀಯ ಹೆದ್ದಾರಿ 13ಕ್ಕೆ ಸಂಪರ್ಕಿಸಿ ಮೇಲ್ದರ್ಜೆಗೆ ಏರಿಸುವುದು. ಈ ಮಾರ್ಗವು ಕಡೂರು, ತುರುವನಹಳ್ಳಿ, ಕಾಮನಕೆರೆ, ಹಿರೇನಲ್ಲೂರು, ಸೊಲ್ಲಾಪುರ, ತಮಟದಹಳ್ಳಿ, ಶಿವನಿ ರೈಲ್ವೆ ಸ್ಟೇಷನ್, ಶಿವನಿ ಮತ್ತು ಕಾರೆಹಳ್ಳಿ ಈ ಊರುಗಳ ಮೂಲಕ ಹಾದುಹೋಗಲಿದೆ ಎಂದು ಹೇಳಿದರು.
ವಾಕಿಂಗ್ ಪಾತ್ಗೆ 10 ಲಕ್ಷ: ನಗರದ ಜಿಲ್ಲಾ ಆಟದ ಮೈದಾನದ ವಾಕಿಂಗ್ ಪಾತ್ ಅಭಿವೃದ್ಧಿ ಕಾಮಗಾರಿ ಅನುಷ್ಠಾನಕ್ಕಾಗಿ ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ 10 ಲಕ್ಷ ಅನುದಾನ ಬಿಡುಗಡೆಯಾಗಿದೆ.
2012- 13ನೇ ಸಾಲಿನಲ್ಲಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆಯವರ ಕೋರಿಕೆಯ ಮೇರೆಗೆ ಸಚಿವ ಜಯರಾಂ ರಮೇಶ್ ಅವರ ಪ್ರದೇಶಾಭಿವೃದ್ದಿ ಯೋಜನೆಯಲ್ಲಿ ಶ್ರೀ ನೇತಾಜಿ ಶುಭಾಶ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ವಾಕಿಂಗ್ ಪಾತ್ ಅಭಿವೃದ್ಧಿ ಕಾಮಗಾರಿಯ ಅನುಷ್ಠಾನಕ್ಕಾಗಿ 10 ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದು, ಈ ಕಾಮಗಾರಿಗಾಗಿ ಅಂದಾಜು ಪಟ್ಟಿಯನ್ನು ತಯಾರಿಸಿದ್ದು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಮೂಲದ ಕಾಮಗಾರಿ ಅನುಷ್ಠಾನದ ಬಗ್ಗೆ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರತಿಪಕ್ಷದ ಆರೋಪ ಅರ್ಥಹೀನ: ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ ಎಂಬ ಪ್ರತಿಪಕ್ಷ ಶಾಸಕರ ಆರೋಪ ಅರ್ಥಹೀನವಾದುದು ಮತ್ತು ಸತ್ಯಕ್ಕೆ ದೂರವಾದುದು ಎಂದು ಅವರು ಹೇಳಿದರು.
ಅಭಿವೃದ್ಧಿ ಕಾಮಗಾರಿಗೆ ನಮ್ಮದೇನೂ ಅಡ್ಡಿ ಇಲ್ಲ. ಆದರೆ ಭಿಅವೃದ್ಧಿ ಹೆಸರಿನಲ್ಲಿ ಹಲವು ಅಕ್ರಮ ನಡೆದಿದ್ದು, ಈಗ ಕರೆದಿರುವ ಎಲ್ಲಾ ಟೆಂಡರ್ ಮರುಪರಿಶೀಲಿಸುವಂತೆ ವಿಪ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರು ರಾಜ್ಯದ ಲೋಕೋಪಯೋಗಿ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಎನ್. ಮಹೇಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಂಕೆಗೆ ಕಾರಣ: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ರು. 20 ಕೋಟಿ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರು. 16 ಕೋಟಿಯ ಕಾಮಗಾರಿ ಕೈಗೆತ್ತಿಕೊಳ್ಳಲು ಸಿಂಗಲ್ ಟೆಂಡರ್ಗೆ ಅನುಮೋದನೆ ನೀಡಲಾಗಿತ್ತು. ಜಿಲ್ಲೆಯಲ್ಲಿರುವ ಗುತ್ತಿಗೆದಾರರು ಹಾಗೂ ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನಲೆಯಲ್ಲಿ ಸಿಂಗಲ್ ಟೆಂಡರ್ ಗುತ್ತಿಗೆ ಮರು ಪರಿಶೀಲಿಸುವಂತೆ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ನಿಯಮಾವಳಿ ಪಾಲಿಸಿಲ್ಲ: ನಗರದ ಎಂ.ಜಿ. ರಸ್ತೆ ಮತ್ತು ಮಾರ್ಕೆಟ್ ರಸ್ತೆ ಕಾಮಗಾರಿ ಟೆಂಡರ್ ಕರೆದು ಅನುಮೋದನೆ ನೀಡುವ ಸಂದರ್ಭದಲ್ಲಿ ನಿಯಮಾವಳಿ ಪಾಲಿಸಿಲ್ಲ. ಆದರೆ ಈ ಕಾಮಗಾರಿ ರು. 10 ಕೋಟಿ ಮೊತ್ತದ ಕಾಮಗಾರಿಯಾಗಿದ್ದರಿಂದ ಸಿಂಗಲ್ ಟೆಂಟರ್ ಅನುಮೋದನೆ ನೀಡದೇ ಮರು ಟೆಂಡರ್ ಕರೆಯಬೇಕಾಗಿದೆ.
ಈ ಎಲ್ಲಾ ಕಾರಣಗಳಿಂದ ಎಂ.ಜಿ. ರಸ್ತೆ ಮತ್ತು ಮಾರ್ಕೆಟ್ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ಅವರಿಂದ ಪರಿಶೀಲನೆ ನಡೆಸಿ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವರಣೆ ಪಡೆಯಬಹುದಾಗಿದೆ ಎಂದು ಹೇಳಿದರು.