ಹೆದ್ದಾರಿಗೆ ಡಿವೈಡರ್ ಅಳವಡಿಸಲು ಸಂಸದರಿಗೆ ಪತ್ರ
ತರೀಕೆರೆ: ಕೆಪಿಸಿಸಿ ಮಾಜಿ ಸದಸ್ಯ ಎಂ. ರಂಗಪ್ಪ ಸಂಸದ ಜಯಪ್ರಕಾಶ್ ಹೆಗಡೆ, ಮತ್ತು ಶಾಸಕ ಜಿ.ಎಚ್. ಶ್ರೀನಿವಾಸ್ ಅವರಿಗೆ ಪತ್ರ ಬರೆದು ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಸಿಸ್ಟಂ ಅಳವಡಿಸಬೇಕೆಂದು ವಿನಂತಿಸಿದ್ದಾರೆ.
ಪಟ್ಟಣದ ಮಧ್ಯದಲ್ಲಿ ಎನ್ಎಚ್ 206 ಹಾದುಹೋಗಿದ್ದು, ಎರಡೂ ಕೆಡೆ ವಿದ್ಯುತ್ ಕಂಬಗಳು ಮತ್ತು ತಗ್ಗು ಗುಂಡಿಗಳು ಇದೆ. ಈವರೆಗೂ ಇದನ್ನು ಸರಿಪಡಿಸಿಲ್ಲ, ತಾಲೂಕು ಸಬ್ ಡಿವಿಜನ್ ಕ್ಷೇತ್ರವಾಗಿರುವುದರಿಂದ ಜನಸಂಖ್ಯೆ ಮತ್ತು ಭಾರಿ ವಾಹನಗಳು ಸಂಚರಿಸುತ್ತಿದ್ದು ದಿನ ಬೆಳಗಾದರೆ, ಅಪಘಾತಗಳು ಅನಾಹುತಗಳು ಆಗುತ್ತಿವೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ವಿದ್ಯುತ್ ಕಂಬಗಳನ್ನು ತೆಗೆಸಿ ಸರಿಯಾದ ರೀತಿಯಲ್ಲಿ ರಸ್ತೆ ಅಭಿವೃದ್ಧಿ ಪಡಿಸಿ ಡಿವೈಡರ್ ಸಿಸ್ಟಂ ಅಳವಡಿಸಲು ಸಾರ್ವಜನಿಕರ ಪರ ಕೇಳಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯ
ಚಿಕ್ಕಮಗಳೂರು: ತಾಲೂಕಿನ ಆಲ್ದೂರು ವಿವಿ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಆಲ್ದೂರು ವಿವಿ ಕೇಂದ್ರದ ನಗರ ಮತ್ತು ಗ್ರಾಮೀಣ ಫೀಡರ್ಗಳಿಂದ ಹೊರಹೊಮ್ಮುವ ಎಲ್ಲಾ ಪ್ರದೇಶಗಳಲ್ಲಿ ಜುಲೈ 3 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಹಿರೇಮಗಳೂರು (ಕರ್ತಿಕೆರೆ) ವಿವಿ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಹಿರೇಮಗಳೂರು (ಕರ್ತಿಕೆರೆ) ವಿ.ವಿ. ಕೇಂದ್ರದ ನಗರ ಮತ್ತು ಗ್ರಾಮೀಣ ಫೀಡರ್ಗಳಿಂದ ಹೊರಹೊಮ್ಮುವ ಎಲ್ಲಾ ಪ್ರದೇಶಗಳಲ್ಲಿ ಜುಲೈ 4 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಲಿಂಗನಮಕ್ಕಿಗೆ ಒಂದೇ ದಿನ 2 ಅಡಿ ನೀರು
ಶಿವಮೊಗ್ಗ: ಮುಂಗಾರು ಮತ್ತೆ ಬಿರುಸಾಗಿದ್ದು, ಕಳೆದ 24 ಗಂಟೆಯಲ್ಲಿ ಜಿಲ್ಲಾದ್ಯಂತ ವ್ಯಾಪಕ ಮಳೆಯಾಗಿದೆ. ಲಿಂಗನಮಕ್ಕಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಒಂದೇ ದಿನ 2 ಅಡಿ ನೀರು ಸಂಗ್ರಹವಾಗಿದೆ.
1,819 ಅಡಿ ಗರಿಷ್ಠ ಸಾಮರ್ಥ್ಯದ ಈ ಜಲಾಶಯದಲ್ಲಿ ಮಂಗಳವಾರ 1,768 ಅಡಿ ನೀರು ಸಂಗ್ರಹವಾಗಿದೆ. ಇದು ಕಳೆದ ವರ್ಷಕ್ಕಿಂತ 20 ಅಡಿ ಹೆಚ್ಚು.
ಲಿಂಗನಮಕ್ಕಿ, ತಾಳಗುಪ್ಪ, ಹೊಸನಗರದಲ್ಲಿ 5 ಸೆ.ಮೀ. ಮಳೆಯಾಗಿದ್ದರೆ, ತೀರ್ಥಹಳ್ಳಿಯಲ್ಲಿ 3 ಸೆ.ಮೀ. ಮಳೆಯಾಗಿದೆ. ಸಾಗರ, ತ್ಯಾಗರ್ತಿ, ಹುಂಚದಕಟ್ಟೆಯಲ್ಲಿ 2, ಸೊರಬದಲ್ಲಿ 1 ಸೆ.ಮೀ. ಮಳೆಯಾಗಿದೆ.