ಜಿಲ್ಲೆಯಲ್ಲಿ ಧಾರಾಕಾರ ಮಳೆ: ಹಲವೆಡೆ ಭೂ ಕುಸಿತ
ಕಪ್ರ ವಾರ್ತೆ ಚಿಕ್ಕಮಗಳೂರು ಜು. 3
ಆರಿದ್ರಾ ಮಳೆಗೆ ಮಲೆನಾಡು ತತ್ತರಿಸುತ್ತಿದೆ. ಧಾರಾಕಾರ ಮಳೆಗೆ ರಸ್ತೆಗಳು, ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಹಲವೆಡೆ ಭೂ ಕುಸಿತ ಉಂಟಾಗಿದೆ. ಇಲ್ಲಿನ ನಾಲ್ಕು ತಾಲೂಕುಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮೂಡಿಗೆರೆ, ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪುರ ತಾಲೂಕುಗಳಲ್ಲಿ ಶಾಲಾ ಕಾಲೇಜುಗಳಿಗೆ ಬುಧವಾರ ರಜೆ ನೀಡಲಾಗಿತ್ತು. ಗುರುವಾರವೂ ಮಳೆ ಮುಂದುವರಿದರೆ ಸ್ಥಳೀಯ ಪರಿಸ್ಥಿತಿಯ ಆಧಾರದ ಮೇಲೆ ರಜೆ ನೀಡಲು ಶಾಲಾಭಿವೃದ್ಧಿ ಸಮಿತಿಗಳಿಗೆ ಸೂಚನೆ ನೀಡಲಾಗಿದೆ.
ಮಂಗಳವಾರ ಮಧ್ಯಾಹ್ನ ಆರಂಭಗೊಂಡ ಮಳೆ ಬುಧವಾರ ಸಂಜೆಯವರೆಗೆ ನಿರಂತರವಾಗಿ ಸುರಿಯುತ್ತಲೇ ಇದ್ದು, ಜಿಲ್ಲೆಯಲ್ಲಿ ಹುಟ್ಟಿ ಹರಿಯುತ್ತಿರುವ ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟವನ್ನು ಮೀರಿವೆ. ನದಿಗಳ ಅಕ್ಕಪಕ್ಕದಲ್ಲಿರುವ ಹೊಲಗದ್ದೆಗಳು ಜಲಾವ್ರತವಾಗಿವೆ. ಹಲವೆಡೆ ಸೇತುವೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿದು ಹೋಗಿದೆ.
ಕೊಪ್ಪ ತಾಲೂಕಿನ ನಾರ್ವೆ, ಹಡ್ಲಿಕೊಪ್ಪ, ನಾಲ್ಗಾಪುರ, ಕಾರಂಜಿಯಲ್ಲಿ ತುಂಗಾ ನದಿಯ ನೀರು ಅಪಾಯದ ಹಂತಕ್ಕೆ ಬಂದಿದೆ. ಶೃಂಗೇರಿಯ ಪಟ್ಟಣದ ಗಾಂಧಿ ಮೈದಾನದ ಜಲಾವ್ರತವಾಗಿದ್ದು, ಇಲ್ಲಿಕೆ ಕೆವಿಆರ್ ರಸ್ತೆಯವರೆಗೆ ನೀರು ಬಂದಿದ್ದರಿಂದ ಇಲ್ಲಿನ ಅಂಗಡಿ ಮತ್ತು ಹೋಟೆಲ್ಗಳ ಒಳಗೆ ನೀರು ನುಗ್ಗಿದೆ. ತುಂಗಾ ನದಿ ನೀರಿನ ಮಟ್ಟ ಏರಿಕೆಯಾಗುತ್ತಲೆ ಇದೆ.
ಸಂಚಾರಕ್ಕೆ ಅಡ್ಡಿ: ಎನ್.ಆರ್.ಪುರ ಪಟ್ಟಣದಿಂದ ಸುಮಾರು 9 ಕಿ.ಮೀ. ದೂರದಲ್ಲಿರುವ ಕುದುರೆಗುಂಡಿ ಸೇತುವೆ ಮೇಲೆ ಹಳ್ಳದ ನೀರು ಹರಿಯುತ್ತಿರುವುದರಿಂದ ಕಾನೂರು ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಅದುದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಹೊಳೆಕೊಪ್ಪ- ಗುಡ್ಡೆ ಹಳ್ಳಿ ಮಾರ್ಗವಾಗಿ ಸಂಚರಿಸುತ್ತಿವೆ.
ತುಂಗಾ ನದಿ ತುಂಬಿ ಹರಿಯುತ್ತಿರುವುದರಿಂದ ಮುತ್ತಿನಕೊಪ್ಪದಲ್ಲಿ ನದಿ ಪಾತ್ರದಲ್ಲಿರುವ ಹೊಲ ಗದ್ದೆಗಳು ಜಲಾವ್ರತವಾಗಿವೆ. ಮುತ್ತಿನಕೊಪ್ಪ- ಮುಡುಬ ಮಾರ್ಗದಲ್ಲಿರುವ ಶಂಕರಪುರ ಸೇತುವೆ ಬಳಿ ಅಪಾಯ ಮಟ್ಟಕ್ಕೆ ನೀರು ಬಂದಿದೆ.
ತುಂಬಿ ಹರಿಯುತ್ತಿರುವ ಭದ್ರೆ: ಮೂಡಿಗೆರೆ ತಾಲೂಕಿನಾದ್ಯಂತ ಮಳೆ ಎಡೆಬಿಡದೇ ಸುರಿಯುತ್ತಿದ್ದು ಹೇಮಾವತಿ, ಭದ್ರೆ ನದಿಗಳು ತುಂಬಿ ಹರಿಯುತ್ತಿದೆ. ಗದ್ದೆಗಳು ಜಲಾವೃತ ಗೊಂಡಿದ್ದು ರೈತರು ಆತಂಕ್ಕಿಡಾಗಿದ್ದಾರೆ.
ಕಳಸ- ಹೊರನಾಡು ರಸ್ತೆಯ ಮೇಲೆ ಭದ್ರಾ ನದಿ ಹರಿಯುತ್ತಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ತಾಲೂಕಿನ ಉಗ್ಗೆಹಳ್ಳಿ ಕಾಲೋನಿಯ ಸಮೀಪ ಹೇಮಾವತಿ ನದಿ ಉಕ್ಕುತ್ತಿದ್ದು. ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದೆ. ಮಳೆ ಮುಂದುವರೆದಲ್ಲಿ ಗ್ರಾಮದ ಮನೆಗಳಿಗೂ ನೀರು ನುಗ್ಗುವ ಸಾಧ್ಯತೆಗಳೆ ಹೆಚ್ಚಾಗಿದೆ. ಉಗ್ಗೆಹಳ್ಳಿ ಕಾಲೋನಿಯೊಳಗೆ ನೀರು ನುಗ್ಗಿದೆ.
ರಸ್ತೆ ಸಂಪರ್ಕ ಕಡಿತ: ಉಗ್ಗೆಹಳ್ಳಿ ಗ್ರಾ.ಪಂ.ಗೆ ಸೇರಿದ ತತ್ಕೊಳ ನಿರಾಶ್ರಿತರು ವಾಸಿಸುತ್ತಿರುವ ಪ್ಯಾಟೇ ಹಿತ್ಲನಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು. ಜನರಿಗೆ ತಮ್ಮನ್ನು ರಕ್ಷಿಸಿಕೊಳ್ಳಲು ಪಟ್ಟಣಕ್ಕೆ ಬರಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ.
ಬಿಡದೆ ಸುರಿಯುತ್ತಿರುವ ಆರಿದ್ರಾ ಮಳೆ ಚಾರ್ಮಡಿ ಘಾಟ್ ನಲ್ಲಿ ಜಲಾಪಾತಗಳು ಸೃಷ್ಠಿಯಾಗಿ ದಾರಿ ಹೋಕರನ್ನು ತಮ್ಮಡೆ ಸೆಳೆಯುತ್ತಿದೆ.
ಚಿಕ್ಕಮಗಳೂರು ತಾಲೂಕಿನಲ್ಲೂ ಎಡೆ ಬಿಡದೆ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ಥವಾಗಿದೆ. ನಿರಂತರವಾಗಿ ಮಳೆ ಬರುತ್ತಿರುವುದರಿಂದ ಮನೆಗಳಿಂದ ಹೊರಗೆ ಬರಲಾರದ ಪರಿಸ್ಥಿತಿ ಇತ್ತು. ಬುಧವಾರ ಸಂತೆ ದಿನವಾಗಿದ್ದು, ಸಂತೆ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿದ್ದವು. ವ್ಯಾಪಾರಸ್ಥರು ಕೊನೆ ಕ್ಷಣದಲ್ಲಿ ಗ್ರಾಹಕರು ಕೇಳಿದಷ್ಟು ಬೆಲೆಗೆ ತರಕಾರಿ ಮಾರಿ ಕೈ ತೋಳೆದುಕೊಂಡರು. ಒಳ ಚರಂಡಿ ನಿರ್ಮಾಣ ಮಾಡಿರುವ ಕೆಲವು ಬಡಾವಣೆಗಳು ಕೆಸರುಮಯವಾಗಿದ್ದು, ಜನರು ಮನೆಯಿಂದ ಹೊರಗೆ ಬರಲಾರದ ಪರಿಸ್ಥಿತಿ ಇತ್ತು. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು ಪಾದಚಾರಿಗಳಿಗೆ ಕಿರಿಕಿರಿಯಾಗಿತ್ತು. ಕಡೂರು ಹಾಗೂ ತರೀಕೆರೆ ತಾಲೂಕುಗಳಲ್ಲಿ ಎಡೆ ಬಿಡದೆ ಮಳೆ ಸುರಿಯುತ್ತಿತ್ತು.
ಮಳೆಯ ವಿವರ: ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದಿರುವ ಮಳೆಯ ವಿವರ ಈ ಕೆಳಕಂಡಂತೆ ಇದೆ.
ಶೃಂಗೇರಿ ತಾಲೂಕಿನ ಕಿಗ್ಗಾದಲ್ಲಿ ಗರಿಷ್ಠ 219.4 ಮಿ.ಮೀ. ಮಳೆ ಬಿದ್ದಿದೆ. ಚಿಕ್ಕಮಗಳೂರು ನಗರ- 16.4, ವಸ್ತಾರೆ- 29.4, ಜೋಳದಾಳು- 48.5, ಆಲ್ದೂರು- 36, ಕೆ.ಆರ್.ಪೇಟೆ- 22.9, ಅತ್ತಿಗುಂಡಿ- 44, ಸಂಗಮೇಶ್ವರಪೇಟೆ- 49.5, ಬ್ಯಾರವಳ್ಳಿ- 18.5, ಮಳಲೂರು- 25.5, ದಾಸರಹಳ್ಳಿ- 20, ಕಡೂರು- 14, ಯಗಟಿ- 14.2, ಸಿಂಗಟಗೆರೆ- 7.2, ಸಖರಾಯಪಟ್ಟಣ- 12.4, ಗಿರಿಯಾಪುರ- 18, ಬೀರೂರು- 18.2, ಎಮ್ಮೆದೊಡ್ಡ- 22, ಕೊಪ್ಪ- 131, ಹರಿಹರಪುರ- 122.2, ಜಯಪುರ- 92.8, ಕಮ್ಮರಡಿ- 187.5, ಬಸರೀಕಟ್ಟೆ- 146.7.
ಮೂಡಿಗೆರೆ- 91.1, ಕೊಟ್ಟಿಗೆಹಾರ- 154, ಜಾವಳಿ- 79, ಗೋಣಿಬೀಡು- 39.4, ಕಳಸ- 116.6, ನ.ರಾ.ಪುರ- 105, ಬಾಳೆಹೊನ್ನೂರು- 83, ಮೇಗರಮಕ್ಕಿ- 43, ಶೃಂಗೇರಿ- 131.5, ಕೆರೆಕಟ್ಟೆ- 205.4, ತರೀಕೆರೆ- 44, ಲಕ್ಕವಳ್ಳಿ- 33.5, ಅಜ್ಜಂಪುರ- 22.8, ಶಿವನಿ- 12.5, ಬುಕ್ಕಾಂಬೂದಿ- 15.5, ಲಿಂಗದಹಳ್ಳಿ- 35.4, ತಣಿಗೆಬೈಲು- 40, ಉಡೇವಾ- 23, ತ್ಯಾಗದಬಾಗಿ- 54.6, ಹುಣಸಘಟ್ಟ- 25.4, ರಂಗೇನಹಳ್ಳಿಯಲ್ಲಿ 54 ಮಿ.ಮೀ. ಮಳೆ ಬಂದಿದೆ. ನದಿ ಪಾತ್ರದಲ್ಲಿ ಧಾರಾಕಾರವಾಗಿ ಮಳೆ ಬರುತ್ತಿರುವುದರಿಂದ ಮುಂದಿನ 24 ಗಂಟೆಗಳಲ್ಲಿ ತುಂಗಾ, ಭದ್ರಾ ಜಲಾಶಯಗಳಲ್ಲಿ ಒಳ ಹರಿವು ಹೆಚ್ಚಳವಾಗಲಿದೆ.