ಬಸ್ ನಿಲ್ದಾಣ ಅನಾಥ...
ಕ.ಪ್ರ.ವಾರ್ತೆ ತರೀಕೆರೆ ಜು.3
ವೇದ ಸುಳ್ಳಾಗಬಹುದು ಗಾದೆ ಮಾತು ಸುಳ್ಳಾಗುವುದಿಲ್ಲ ಎನ್ನುವ ಮಾತೊಂದಿದೆ. ಓಲ್ಡ್ ಈಸ್ ಗೋಲ್ಡ್ ಎನ್ನುವ ಮಾತು ತರೀಕೆರೆ ಪುರಸಭೆ ಮರೆತಂತಿದೆ.
ತರೀಕೆರೆ ರೈಲು ನಿಲ್ದಾಣ ಎಷ್ಟು ಹಳೆಯದೋ, ಪುರಸಭೆ ವತಿಯ ಖಾಸಗಿ ಬಸ್ಟ್ಯಾಂಡ್ ಕೂಡ ಅಷ್ಟೇ ಪುರಾತನವಾದುದು. ಪಟ್ಟಣದ ಕೇಂದ್ರ ಬಿಂದುವಿನಲ್ಲಿರುವ ಈ ಖಾಸಗಿ ಬಸ್ ನಿಲ್ದಾಣ ಸುತ್ತಮುತ್ತಲಿನ ಊರುಗಳಿಂದ ಬರುವ ಮತ್ತು ಪಟ್ಟಣದಿಂದ ಹೊರಹೋಗುವ ಎಲ್ಲ ಖಾಸಗಿ ಬಸ್‌ಗಳಿಗೆ ಮತ್ತು ಪ್ರಯಾಣಿಕರಿಗೆ ಸಂಪರ್ಕದ ದೃಷ್ಟಿಯಿಂದ ಅತ್ಯಂತ ಸುಲಭ ಮತ್ತು ಸರಳತೆಯಿಂದ ಕೂಡಿ ಪ್ರಯಾಣಿಕರ ಮನಸ್ಸಿನಲ್ಲಿ ಒಂದು ಶಾಶ್ವತವಾದ ಸ್ಥಾನ ಪಡೆದಿದೆ.
ಎಲ್ಲ ಕಚೇರಿಗಳಿಗೆ ಹತ್ತಿರ- ಉಪ ವಿಭಾಗಾಧಿಕಾರಿ ಕಚೇರಿಯಿಂದ ಹಿಡಿದು ತಹಶೀಲ್ದಾರ್ ಕಚೇರಿ, ಪೊಲೀಸ್ ಸ್ಟೇಷನ್, ಸಬ್ ರಿಜಿಸ್ಟ್ರಾರ್ ಕಚೇರಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಕಚೇರಿ, ಪಿ.ಡಬ್ಲೂ.ಡಿ. ಸಾರ್ವಜನಿಕ ಆಸ್ಪತ್ರೆ, ಪುರಸಭೆ, ಪ್ರವಾಸಿ ಮಂದಿರ, ರೈಲು ನಿಲ್ದಾಣ ಇತ್ಯಾದಿ ಸಾರ್ವಜನಿಕರ ದಿನ ನಿತ್ಯದ ವಹಿವಾಟುಗಳಿಗೆ ಅತಿ ಹತ್ತಿರದ ಸಂಪರ್ಕ ಸೇತುವೆಯಾಗಿದ್ದ ಹಳೇ ಖಾಸಗಿ ಬಸ್ ನಿಲ್ದಾಣ ಇಂದು ಪುರಸಭೆಯ ತೀವ್ರ ನಿರ್ಲಕ್ಷ್ಯಕ್ಕೆ ಒಳಾಗಾಗಿ ಅಭಿವೃದ್ಧಿ ಕಾಣದೆ ಹಳೆಯ ಪಳೆಯುಳಿಕೆಯಂತಾಗಿದೆ.
ಹಳೇ ಬಸ್ಟ್ಯಾಂಡ್‌ನ ಪುರಸಭೆ ಮಳಿಗೆಗಳಲ್ಲಿ ಪ್ರಯಾಣಿಕರಿಗೆ ಅಗತ್ಯವಾಗಿ ಬೇಕಾಗಿದ್ದ ವಿಶ್ರಾಂತಿ ಸ್ಥಳ, ಬಸ್ ನಿರೀಕ್ಷಣಾ ಕೋಣೆ, ಹೋಟೆಲ್, ಹೂವು ಹಣ್ಣಿನ ಅಂಗಡಿ ಇತ್ಯಾದಿ ಎಲ್ಲ ಅನುಕೂಲತೆಗಳು ನಿಲ್ದಾಣದಲ್ಲಿದ್ದು ನಿಜಕ್ಕೂ ಜನರಿಗೆ ತುಂಬಾ ಆನುಕೂಲವಾಗಿತ್ತು.
ಹೇರಳ ಆದಾಯ: ಬಸ್ಟ್ಯಾಂಡ್ ವ್ಯಾಪ್ತಿ ಅಷ್ಟೇನೂ ವಿಶಾಲವಲ್ಲದಿದ್ದರೂ ಹೋಟೆಲ್ ವಾಣಿಜ್ಯ ಮಳಿಗೆ, ಖಾಸಗಿ ಬಸ್‌ಗಳ ತೆರಿಗೆ ಇತ್ಯಾದಿಗಳಿಂದ ಪುರಸಭೆ ಖಜಾನಗೆ ಚಿನ್ನದ ಮೊಟ್ಟೆಯಂತೆ ಹೇರಳ ಆದಾಯ ತರುತ್ತಿದ್ದ ಖಾಸಗಿ ಬಸ್ ನಿಲ್ದಾಣ ಇಂದು ಅನಾಥವಾಗಿದೆ.
ಹೋಟೆಲ್, ವಾಣಿಜ್ಯ ಮಳಿಗೆಗಳ ಕಟ್ಟಡ ಎಲ್ಲವೂ ಬಿದ್ದು ಹೋಗಿದೆ, ಹಳೇ ಖಾಸಗಿ ಬಸ್ಟ್ಯಾಂಡ್ ಇಂದೂ ಸಹ ಪಟ್ಟಣಕ್ಕೆ ಬರುಹೋಗುವ ಬಸ್‌ಗಳಿಂದ ತುಂಬಿದ್ದರೂ ಪ್ರಯಾಣಿಕರಿಗೆ ಮಾತ್ರ ಯಾವುದೇ ಅನುಕೂಲಗಳಿಲ್ಲದೆ ಸೊರಗಿದೆ.
ಬಸ್‌ಗಾಗಿ ಕಾಯುವ ಪ್ರಯಾಣಿಕರಿಗೆ ಆಶ್ರಯ ನೀಡುವ ತಾಣವಾಗಲಿ, ಸುಸಜ್ಜಿತವಾದ ವಾಣಿಜ್ಯ ಮಳಿಗೆಗಳಾಗಲಿ, ನಿಲ್ದಾಣ ಪ್ರವೇಶಿಸಿದ ಬಸ್‌ಗಳು ಕ್ರಮಬದ್ಧವಾಗಿ ನಿಲ್ಲಲು ಕಾರಿಡಾರ್ ವ್ಯವಸ್ಥೆಯಾಗಲಿ ಏನೊಂದು ಇಲ್ಲ.
ಹೆಚ್ಚು ಬಸ್‌ಗಳು: ಪಟ್ಟಣದ ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ 70ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ನಿಲ್ದಾಣಕ್ಕೆ ಬಂದು ಹೋಗುತ್ತವೆ, ಸ್ಥಳೀಯ ಪುರಸಭೆಗೆ ಪ್ರತಿವರ್ಷ ದಾಖಲಿಸುವಷ್ಟು ಆದಾಯ ತರುತ್ತಿರುವ ಈ ಖಾಸಗಿ ಬಸ್ ನಿಲ್ದಾಣದಲ್ಲಿ ಹೋಟೆಲ್ ಕಟ್ಟಡ, ವಾಣಿಜ್ಯ ಮಳಿಗೆಗಳನ್ನು ಪುನರ್‌ನಿರ್ಮಾಣ ಮಾಡಿ, ಪ್ರಯಾಣಿಕರಿಗೆ ಹೆಚ್ಚನ ಸೌಲಭ್ಯಗಳನ್ನು ಒದಗಿಸಿಕೊಡುವುದರ ಮೂಲಕ ಪುರಸಭೆ ಒಳ್ಳೆಯ ಆದಾಯವನ್ನು ಪಡೆಯಬಹುದಾಗಿದೆ ಎನ್ನತ್ತಾರೆ ಖಾಸಗಿ ಬಸ್ ಏಜೆಂಟ್ ಸಂಘದ ಅಧ್ಯಕ್ಷರಾದ ಸೋಮಯ್ಯ.
ಸ್ಥಳೀಯ ಪುರಸಭೆ ಕೂಡಲೇ ಹೆಚ್ಚು ಆಸಕ್ತಿ ಮತ್ತು ಆದ್ಯತೆ ನೀಡಿ ಬಸ್ಟ್ಯಾಂಡ್‌ನ್ನು ಎಲ್ಲ ರೀತಿಯಿಂದಲೂ ಸಜ್ಜುಗೊಳಿಸಿ ಮತ್ತು ಇಂದಿನ ಸಂದರ್ಭಕ್ಕೆ ತಕ್ಕೆಂತೆ ವಿಶಾಲಗೊಳಿಸಿ, ಎಲ್ಲ ಅನುಕೂಲತೆಗಳನ್ನು ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಅನಂತ ನಾಡಿಗ್