ಶವ ಸಂಸ್ಕಾರ ತಡೆಗೆ ಆಗ್ರಹ
ಚಿಕ್ಕಮಗಳೂರು: ಜನ ವಸತಿ ಪ್ರದೇಶದಲ್ಲಿ ಹೆಣ ಹೂಳುವುದನ್ನು ಹಾಗೂ ಸುಡುವುದನ್ನು ತಕ್ಷಣ ನಿಲ್ಲಿಸುವಂತೆ ಇಲ್ಲಿನ ಕಲ್ಯಾಣನಗರದಲ್ಲಿರುವ ಸಿಡಿಎ ಲೇಔಟ್‌ನ 4 ಹಂತದ ನಿವಾಸಿಗರು ಆಗ್ರಹಿಸಿದ್ದಾರೆ.
ಈ ಸಂಬಂಧ ವಿಧಾನಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ ಅವರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ. ನಗರದ ಸಿಡಿಎ ಲೇಔಟ್‌ನ 4 ಹಂತದಲ್ಲಿ ಸುಮಾರು 20-30 ಕುಟುಂಬಗಳು ವಾಸಿಸುತ್ತಿವೆ. ಹಿಂದೆ ಸಿಡಿಎ ವತಿಯಿಂದ ನಿವೇಶನಗಳನ್ನು ಹರಾಜು ಮೂಲಕ ನೀಡುವಾಗ ಡಿ- 196 ಮತ್ತು ಡಿ- 197 ನಿವೇಶನಗಳ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಯಾರೂ ಹೆಣವನ್ನು ಹೂಳುವುದಿಲ್ಲ ಮತ್ತು ಸುಡುವುದಿಲ್ಲ ಎಂದು ಹೇಳಿ ಸಿಡಿಎ ರವರು ನಿವೇಶನಗಳನ್ನು ನೀಡಿರುತ್ತಾರೆ.
ಸದರಿ ಜಾಗದಲ್ಲಿ 60 ಅಡಿ ರಸ್ತೆ ನಿರ್ಮಿಸಿ, ಹೌಸಿಂಗ್ ಬೋರ್ಡ್ ಸಂಪರ್ಕ ಕಲ್ಪಿಸುತ್ತೇವೆಂದು ಹೇಳಿ ನಮಗೆ ನಿವೇಶನವನ್ನು ನೀಡಿರುತ್ತಾರೆ. ಆದರೆ, ಈ ಜಾಗದಲ್ಲಿ ನರಿಗುಡ್ಡನಹಳ್ಳಿ, ಕಲ್ಯಾಣನಗರ, ಜ್ಯೋತಿನಗರ ಬಡಾವಣೆಯವರು ಯಾರೇ ನಿಧನ ಹೊಂದಿದರು ಖಾಲಿ ಇರುವ ಜಾಗದಲ್ಲಿ ಅಂತ್ಯಕ್ರಿಯೆಯನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಅವರನ್ನು ವಿಚಾರಿಸಿದರೆ, ನಾವು ಇಲ್ಲಿಯೇ ಅಂತ್ಯಕ್ರಿಯೆ ನಡೆಸುತ್ತೇವೆಂದು ಹೇಳಿ ಜಗಳಕ್ಕೆ ಬರುತ್ತಿದ್ದಾರೆ.
ಇಲ್ಲಿ ಹೆಣ ಹೂಳುವುದು, ಸುಡುವುದರಿಂದ ಕುಟುಂಬಗಳು ಭಯಭೀತರಾಗಿರುತ್ತಾರೆ. ಸ್ಮಶಾನದ ಪಕ್ಕದಲ್ಲಿ ಸಮಾಜಕಲ್ಯಾಣ ಇಲಾಖೆ ಮತ್ತು ಬಿಸಿಎಂ ಹಾಸ್ಟೆಲ್‌ಗಳಿದ್ದು, ವಿದ್ಯಾರ್ಥಿಗಳು ಹೆದರಿಕೆಯಿಂದ ಕಾಲ ಕಳೆಯಬೇಕಾಗಿದೆ. ಈ ಬಗ್ಗೆ ಸಿಡಿಎಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅದ್ದರಿಂದ ಇಲ್ಲಿ ನಡೆಯುತ್ತಿರುವ ಅಂತ್ಯಕ್ರಿಯೆಯನ್ನು ನಿಲ್ಲಿಸುವಂತೆ ಸಿಡಿಎ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವುದಲ್ಲದೆ, ಸದರಿ ಸ್ಮಶಾನವನ್ನು ಬೇರೆಡೆಗೆ ಸ್ಥಳಾಂತರ ಮಾಡಿಕೊಡಬೇಕೆಂದು ಕೋರಿದ್ದಾರೆ. ಈ ಸಂದರ್ಭದಲ್ಲಿ ನಿವಾಸಿಗಳಾದ ಸ್ವರೂಪ್, ಪ್ರಸನ್ನ, ಕವಿತಾ, ಭಾಗ್ಯ, ಪಾರ್ವತಮ್ಮ, ಚೇತನ್ ಇದ್ದರು.
--