ಶಾಲಾ ಪ್ರವೇಶಕ್ಕೆ ಆಧಾರ್ ಕಡ್ಡಾಯವಲ್ಲ
ಚಿಕ್ಕಮಗಳೂರು: ಶಾಲಾ, ಕಾಲೇಜುಗಳಲ್ಲಿ ಪ್ರವೇಶ ಹಾಗೂ ವಿದ್ಯಾರ್ಥಿ ವೇತನ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಜಿಲ್ಲಾಧಿಕಾರಿ ವಿ. ಯಶವಂತ್ ಹೇಳಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಶೇ.32ರಷ್ಟು ಕುಟುಂಬಗಳು ಮಾತ್ರ ಆಧಾರ್ ಕಾರ್ಡ್ ಪಡೆದುಕೊಂಡಿವೆ ಎಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ತಿಳಿಸಿದರು. ಮಲೆನಾಡಿನ ಕೆಲವು ತಾಲೂಕು ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಪಡೆಯುವ ಕೇಂದ್ರಗಳನ್ನು ತೆರೆಯಲು ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ಶಾಲಾ, ಕಾಲೇಜುಗಳ ಪ್ರವೇಶ ಹಾಗೂ ವಿದ್ಯಾರ್ಥಿ ವೇತನಕ್ಕೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸುವುದು ಸರಿಯಲ್ಲ. ಇದನ್ನು ಕಡ್ಡಾಯಗೊಳಿಸಬಾರದೆಂದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
8ರಂದು ಗಾನ ಸಂಧ್ಯಾ
ತರೀಕೆರೆ: ನಾಗರಿಕರು, ಭಜನ ಮಂಡಳಿಗಳು, ಮಹಿಳಾ ಸ್ವಸಹಾಯ ಸಂಘಗಳಿಂದ ಜುಲೈ 8 ರ ಸಂಜೆ 5-30ಕ್ಕೆ ಲಕ್ಕವಳ್ಳಿಯ ಮಹಾಗಣಪತಿ ಸಮುದಾಯ
ಭವನದಲ್ಲಿ ಗಾಯನಾಚಾರ್ಯ ಗುರುರಾಜ ದೇಶಪಾಂಡೆ ಹಾಗೂ ಭಾರತರತ್ನ ಪಂಡಿತ ಭೀಮಸೇನ ಜೋಷಿಯವರ ಶಿಷ್ಯ, ಪ್ರಖ್ಯಾತ ಹಿಂದೂಸ್ಥಾನಿ ಗಾಯಕ ಪಂಡಿತ ವಿನಾಯಕ ತೊರವಿ ಮತ್ತು ಬಳಗ ದವರಿಂದ ಗಾನ ಸಂಧ್ಯಾ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.
ದಿಗ್ವಿಜಯ ಹೇಳಿಕೆ ಹಿಂಪಡೆಯಲು ಬಿಜೆಪಿ ಆಗ್ರಹ
ತರೀಕೆರೆ: ದಿಗ್ವಿಜಯ ಸಿಂಗ್ ಅವರು ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಬಿಜೆಪಿ ಸಂಚು ರೂಪಿಸಿದೆ ಎಂದು ಹೇಳಿದ್ದು, ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಆರ್. ದೇವಾನಂದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದಿಗ್ವಿಜಯ ಸಿಂಗ್ ಅವರು ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಡೆದಿರುವ ಅನಾಹುತಗಳಿಗೆ ಮೊದಲು ಜನತೆಗೆ ವಿವರಣೆ ನೀಡಲಿ. ಕಾಂಗ್ರೆಸ್‌ನವರು ಯುಪಿಎ ಸರ್ಕಾರದ ವೈಫಲ್ಯ ಮರೆ ಮಾಚಲು ಇಲ್ಲದ ಹೇಳಿಕೆ ನೀಡುವುದನ್ನು ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.
ಡೆಂಘೀ ನಿಯಂತ್ರಣಕ್ಕೆ ಮುಂದಾಗಿ: ಬಿಇಒ
ಮೂಡಿಗೆರೆ: ಮಲೇರಿಯ, ಡೆಂಘೀ, ಚಿಕೂನ್ ಗುನ್ಯಾದಂತಹ ಕೀಟಜನ್ಯ ರೋಗಗಳು ಮಾರಣಾಂತಿಕವಾಗಿದ್ದು, ಸೊಳ್ಳೆಗಳ ಉತ್ಪತ್ತಿ ತಡೆಯಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಧಾಕರ್ ತಿಳಿಸಿದರು. ತಾಲೂಕಿನ ದಾರದಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಸಿದ ಮುಂಜಾಗ್ರತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.