9,607 ಹೆಕ್ಟೇರ್ ಅರಣ್ಯ ಒತ್ತುವರಿ: ಡಾ.ಪಿ. ಶಂಕರ್
ಕೊಪ್ಪ: ಕೊಪ್ಪ ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 9,607 ಹೆಕ್ಟೇರ್ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ. ಶಂಕರ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 342 ಮಂದಿ 10 ಎಕರೆಗಿಂತ ಮೇಲ್ಪಟ್ಟು ಒತ್ತುವರಿ ಮಾಡಿದ್ದು, ಒಟ್ಟು 2.552 ಹೆಕ್ಟೇರ್ ಒತ್ತುವರಿಯಾಗಿದೆ. ಅದೇ ರೀತಿ 6,820 ಪ್ರಕರಣಗಳಲ್ಲಿ 10 ಎಕರೆಗಿಂತ ಕಡಿಮೆ ಒತ್ತುವರಿ ಮಾಡಿದ್ದು, ಒಟ್ಟು 7,055 ಹೆಕ್ಟೇರ್ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಒತ್ತುವರಿ ತೆರವು ಅನಿವಾರ್ಯವಾಗಿದ್ದು, ಮೊದಲ ಹಂತದಲ್ಲಿ 10 ಎಕರೆಗಿಂತ ಮೇಲ್ಪಟ್ಟ ಒತ್ತುವರಿ ತೆರವುಗೊಳಿಸಲಾಗುವುದು. ಸಂಬಂಧಿಸಿದ ಒತ್ತುವರಿದಾರರಿಗೆ ಸೂಕ್ತ ದಾಖಲೆ ಒದಗಿಸುವಂತೆ ಸಮಯಾವಕಾಶ ನೀಡಿ, ಮೂರು ಹಂತಗಳಲ್ಲಿ ನೋಟಿಸ್ ನೀಡಲಾಗುವುದು. ಸರಿಯಾದ ದಾಖಲೆ ಒದಗಿಸದಿದ್ದಲ್ಲಿ ಅಂತಹ ಒತ್ತುವರಿಯನ್ನು ಅಕ್ರಮವೆಂದು ಪರಿಗಣಿಸಿ ತೆರವು ಮಾಡಲಾಗುವುದು ಎಂದರು.
126 ಹೆಕ್ಟೇರ್ ತೆರವು: ಈಗಾಗಲೇ 10 ಎಕರೆಗಿಂತಲೂ ಮೇಲ್ಪಟ್ಟ ಒತ್ತುವರಿ ಮಾಡಿರುವ 182 ಮಂದಿಗೆ ನೋಟಿಸ್ ನೀಡಿದೆ.19 ಪ್ರಕರಣಗಳಲ್ಲಿ 126 ಹೆಕ್ಟೇರ್ ಅರಣ್ಯ ಭೂಮಿ ತೆರವುಗೊಳಿಸಲಾಗಿದೆ. ತೆರವು ಮಾಡಿದ ಜಾಗದಲ್ಲಿ ಸ್ವಾಭಾವಿಕ ಅರಣ್ಯ ಅಭಿವೃದ್ಧಿಪಡಿಸಿ, ಜೀವಸಂಕುಲದ ಸಂರಕ್ಷಣೆ ಸರ್ಕಾರದ ಉದ್ದೇಶ ಎಂದರು.