ಅತ್ಯಾಚಾರ: ಜಾಗೃತಿ ಕಾರ್ಯಾಗಾರ
ಚಿಕ್ಕಮಗಳೂರು: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳ ತಡೆಗಾಗಿ ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿ ಮಹಿಳೆ ಮತ್ತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಾಗಾರಗಳನ್ನು ಏರ್ಪಡಿಸಲಾಗುವುದು ಎಂದು ಇನ್ನರ್ ವ್ಹೀಲ್ ಕ್ಲಬ್‌ನ ನೂತನ ಅಧ್ಯಕ್ಷೆ ಕವಿತಾ ನಿಯತ್ ಹೇಳಿದ್ದಾರೆ.
ನಗರದ ಸವೂರ್ ಸಭಾಂಗಣದಲ್ಲಿ ನಡೆದ ಇನ್ನರ್ ವ್ಹೀಲ್ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನ ಸ್ವೀಕರಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆ ನಿಟ್ಟಿನಲ್ಲಿ ಪ್ರಮುಖವಾಗಿ ಶಾಲಾ ಕಾಲೇಜು ಯುವತಿಯರಿಗೆ ಮುಂಜಾಗ್ರತಾ ಕ್ರಮ ವಹಿಸುವ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಲು ಸ್ವ ಉದ್ಯೋಗ ಕೈಗೊಳ್ಳಲು ಉತ್ತೇಜಿಸುವಂತಹ ಕಾರ್ಯಾಗಾರ ಹಮ್ಮಿಕೊಳ್ಳುವ ಜೊತೆಗೆ ಆರೋಗ್ಯ, ನೈರ್ಮಲ್ಯ, ಶೌಚಾಲಯ ಮತ್ತು ಶೈಕ್ಷಣಿಕವಾಗಿ ಅರಿವು ಮೂಡಿಸಲಾಗುವುದು. ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಕ್ಲಬ್ ವತಿಯಿಂದ ಶೌಚಾಲಯ ನಿರ್ಮಿಸಿಕೊಡಲಾಗುವುದು ಎಂದು ತಿಳಿಸಿದರು.
ಮಾಜಿ ಅಧ್ಯಕ್ಷೆ ಶಶಿಕಲಾ ನಂಜುಂಡಸ್ವಾಮಿ ಮಾತನಾಡಿದರು. ಕಾರ್ಯದರ್ಶಿ ಪದ್ಮಾ ಜಯಪ್ರಕಾಶ್, ಖಜಾಂಚಿ ಜೆ.ಪಿ. ಪ್ರಸಾದ್, ಐ.ಎಸ್.ಓ. ವೀಣಾ ಮತ್ತಿತರರು ಪದಗ್ರಹಣದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.